ಹಾಸನ: ಬುದ್ದಿವಾದ ಹೇಳಿದರೂ ಕೇಳದ ತನ್ನ ವ್ಯಸನ ಪೀಡಿತ ಪತ್ನಿಯನ್ನು ಕೊಲೆಮಾಡಿ, ತಲೆ ಮೆರೆಸಿಕೊಂಡ ಆರೋಪಿ ಪತಿಯನ್ನು ಆಲೂರು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ತಿಳಿಸಿದರು.
ತಮ್ಮ ಕಚೇರಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಆರೋಪಿ ಮಂಜುನಾಥ್ (36) ನನ್ನು ಕೃತ್ಯದ ಬಗ್ಗೆ ಕೂಲಂಕಷ ವಿಚಾರಣೆಗೆ ಒಳಪಡಿಸಿದಾಗ, ಆರೋಪಿಯು ಸುಮಿತ್ರಳನ್ನು ಕಳೆದ 13 ವರ್ಷದ ಹಿಂದೆ ಬೆಂಗಳೂರಿನಲ್ಲಿ ಪ್ರೀತಿಸಿ ಮದುವೆಯಾಗಿದ್ದನು. ಪತ್ನಿ ಸುಮಿತ್ರ ಮದ್ಯಪಾನ ಮಾಡುವುದು ಮತ್ತು ಬೇರೆಯವರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಳ್ಳುವ, ಕಳ್ಳತನ ಮಾಡುವ ಪ್ರವೃತ್ತಿ ಹೊಂದಿದ್ದಳು.
‘ಇದು ಸರಿಯಲ್ಲ, ಕುಟುಂಬಕ್ಕೆ ಕೆಟ್ಟ ಹೆಸರು ಬರುತ್ತದೆ. ನಮ್ಮ ಮಾನ ಮರ್ಯಾದೆ ಹೋಗುತ್ತದೆ, ಮಕ್ಕಳ ಜೀವನ ಹಾಳಾಗುತ್ತದೆ’ ಎಂದು ಎಷ್ಟು ಬಾರಿ ಬುದ್ಧಿವಾದ ಹೇಳಿದ್ದಾನೆ. ಆದರೂ ಆಕೆ ತನ್ನ ಚಾಳಿ ಮುಂದುವರೆಸಿದ್ದಳು. ಇದರಿಂದ ರೊಚ್ಚಿಗೆದ್ದ ಆರೋಪಿ ಮರದ ತುಂಡಿನಿಂದ ಸುಮಿತ್ರಳ ತಲೆಗೆ ಹೊಡೆದು ಕೊಲೆಗೈದು, ಯೂಸುಫ್ ಎಂಬುವರ ಜಮೀನಿನಲ್ಲಿ ಇದ್ದ ಮರಳಿನಲ್ಲಿ ಆಕೆಯ ಶವವನ್ನು ಹೂತಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದಯ ವಿವರ ನೀಡಿದರು.
ಇದನ್ನೂ ಓದಿ: ಪತ್ನಿ ಮೇಲೆ ಅನುಮಾನ: ಕೊಚ್ಚಿ ಕೊಂದು ಪತಿ ಪರಾರಿ
ಆರೋಪಿ ಮಂಜುನಾಥ್ ಬೇಲೂರು ತಾಲೂಕು ಬಿಕ್ಕೋಡು ಹೋಬಳಿ, ಚೋಕನಹಳ್ಳಿ ಗ್ರಾಮದವನಾಗಿದ್ದನು. ಕಾರ್ಯಾಚರಣೆ ತಂಡದಲ್ಲಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಟಿ.ಸಿ. ವೆಂಕಟೇಶ, ಆಲೂರು ಪೊಲೀಸ್ ಠಾಣೆ ಸಿಬ್ಬಂದಿ ನವೀನ, ಮಧು, ರೇವಣ್ಣ, ಸೋಮಶೇಖರ, ಗುರುಮೂರ್ತಿ, ಪ್ರವೀಣ್ ಅವರು ಕಾರ್ಯವನ್ನು ಮೆಚ್ಚಿ ಎಸ್‌ಪಿ ವಿಶೇಷ ಬಹುಮಾನ ಘೋಷಿಸಿದರು.
ಇದೇ ಅಕ್ಟೋಬರ್ 11 ರಂದು ಮೃತಳ ಶವ ಪತ್ತೆಯಾಗಿ, ಆಲೂರು ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಬಳಿಕ ಆರೋಪಿ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ನಂದಿನಿ ಅವರ ಮೇಲುಸ್ತುವಾರಿಯಲ್ಲಿ ಸಕಲೇಶಪುರ ಉಪ ವಿಭಾಗದ ಡಿವೈಎಸ್‌ಪಿ ಗೋಪಿ ಉಸ್ತುವಾರಿಯಲ್ಲಿ ಆಲೂರು ಪೊಲೀಸ್ ನಿರೀಕ್ಷಕ ವೆಂಕಟೇಶ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಇದನ್ನೂ ಓದಿ: ಎಸ್ಬಿಐಗೆ 1,800 ಕೋಟಿ ರೂ. ಸಾಲ ವಂಚನೆ: ಮೂರು ಕಡೆ ಸಿಬಿಐ ದಾಳಿ, ಕಂಪನಿಗಳ ಕಡತ ಶೋಧ