ಹಾಸನ : ಸರ್ಕಾರಿ ನರ್ಸಿಂಗ್ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಗತ್ಯ ಸುರಕ್ಷತಾ ಸಾಮಗ್ರಿ, ಆಹಾರ ವ್ಯವಸ್ಥೆ ಹಾಗೂ ಇಂಟರ್ನ್ಶಿಪ್ ವೇತನ ನೀಡುವಂತೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಇಂಟರ್ನ್ಶಿಪ್ಗೆಂದು ಈಗಾಗಲೇ ವಿದ್ಯಾರ್ಥಿಗಳನ್ನು ಕರೆಸಿಕೊಂಡಿದ್ದಾರೆ. ಆದರೆ, ಕೊರೊನಾ ಹಿನ್ನೆಲೆ ಎಲ್ಲಾ ವರ್ಗದ ವಿದ್ಯಾರ್ಥಿಗಳ ಪೋಷಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯಾರ್ಥಿಗಳಿಗೆ ಊಟದ ವೆಚ್ಚವನ್ನು ಕೂಡ ಭರಿಸಲಾಗುತ್ತಿಲ್ಲ. ಹೀಗಾಗಿ ಇಂಟರ್ನ್ಶಿಪ್ನಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಅಗತ್ಯ ಸುರಕ್ಷಿತಾ ವಸ್ತುಗಳನ್ನು ನೀಡುವುದರೊಂದಿಗೆ ಆಹಾರದ ವ್ಯವಸ್ಥೆ ಮಾಡಬೇಕು. ಜೊತೆಗೆ ಇಂಟರ್ನ್ಶಿಪ್ ವೇತನವನ್ನೂ ನೀಡಬೇಕು ಎಂದು ಒತ್ತಾಯಿಸಿದರು.
ಕೊರೊನಾ ವಿರುದ್ಧದ ಹೋರಾಟದಲ್ಲಿ ವೈದ್ಯರು, ನರ್ಸ್ಗಳೊಂದಿಗೆ ನರ್ಸಿಂಗ್ ವಿದ್ಯಾರ್ಥಿಗಳು ಕೂಡ ತಮ್ಮ ಜೀವದ ಹಂಗನ್ನು ತೊರೆದು ಸೇವೆಯಲ್ಲಿ ನಿರತರಾಗಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಗಮನ ಹರಿಸಿ ವಿದ್ಯಾರ್ಥಿಗಳ ಬೇಡಿಕೆ ಪೂರೈಸಬೇಕಿದೆ ಎಂದರು.