ಸಕಲೇಶಪುರ : ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹರೀಶ್ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆಂದು ತಾಲೂಕು ದಲಿತ ಪರ ಒಕ್ಕೂಟದ ಮುಖಂಡ ಹೆತ್ತೂರು ದೊಡ್ಡಯ್ಯ ಆರೋಪಿಸಿದ್ದಾರೆ.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾ.ಪಂ ಅಧ್ಯಕ್ಷೆ ಶ್ವೇತಾ ಪ್ರಸನ್ನ ಅಧ್ಯಕ್ಷತೆಯಲ್ಲಿ ನಡೆದ ದಲಿತ ಮುಖಂಡರುಗಳ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಸಕಲೇಶಪುರ ತಾಲ್ಲೂಕು ಪಂಚಾಯಿತಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದಂತಹ ಪರಿಶಿಷ್ಟ ಜಾತಿಯ ಕ್ಯಾಮನಹಳ್ಳಿ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿದ್ದ ಮಂಜುನಾಥ್ ರಾಜೀನಾಮೆ ಬಳಿಕ ಬೇರೆ ಪರಿಶಿಷ್ಟ ಜಾತಿಯ ಸದಸ್ಯರಿಗೆ ಆಯ್ಕೆ ಮಾಡಬೇಕಾಗಿದ್ದ ಸ್ಥಾನವನ್ನು ಬೇರೆಯವರಿಗೆ ನೀಡಿರುವುದು ಖಂಡನೀಯ ಎಂದರು.
ಪರಿಶಿಷ್ಟರನ್ನು ಬಿಟ್ಟು ಬೇರೆ ಯಾವುದೇ ಜಾತಿಯ ಸದಸ್ಯರು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆಯಾಗಲು ಕಾನೂನಿನಲ್ಲಿ ಅವಕಾಶವಿದೆ. ಸಾಮಾನ್ಯ ವರ್ಗದ ಎಚ್.ಎಚ್ ಉದಯಕುಮಾರ್‌ವರಿಗೆ ಪರಿಶಿಷ್ಟ ಜಾತಿಯ ಸಾಮಾಜಿಕ ನ್ಯಾಯ ಸಮಿತಿಯ ಅಧಿಕಾರ ಹಸ್ತಾಂತರ ಮಾಡಿರುವುದು ಖಂಡನೀಯ. ಹಾಗಾಗಿ ಅವರನ್ನು ತಕ್ಷಣ ಕೆಲಸದಿಂದ ಅಮಾನತ್ತು ಮಾಡಿ ಕಾನೂನು ರೀತಿ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ರು.