ಹಾಸನ: ಖಾಸಗಿ ಶಾಲೆಗಳಿಗೆ ಆರ್ಟಿಇ ಶುಲ್ಕ ಸಂಪೂರ್ಣ ಪಾವತಿ ಮಾಡಿದ್ದೇವೆಂದು ಹೇಳುವ ಶಿಕ್ಷಣ ಸಚಿವರ ಹೇಳಿಕೆ ಶುದ್ಧ ಸುಳ್ಳು. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ತೊಂದರೆ ನೀಡಬೇಕೆಂಬ ಸ್ಯಾಡಿಸ್ಟ್ ಮನೋಭಾವ ಹೊಂದಿದ್ದಾರೆಂದು ರಾಜ್ಯ ಖಾಸಗಿ ಶಾಲೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಅವರು ಶಿಕ್ಷಣ ಸಚಿವರ ವಿರುದ್ಧ ಹರಿಹಾಯ್ದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಶಾಲೆಗಳಿಗೆ ಆರ್ಟಿಇ ಶುಲ್ಕ ಸಂಪೂರ್ಣ ಪಾವತಿ ಮಾಡಿರೋದಾಗಿ ಶಿಕ್ಷಣ ಸಚಿವರ ಹೇಳಿಕೆ ಅಪ್ಪಟ ಸುಳ್ಳು. ಇದುವರೆಗೂ ಒಂದು ಬಿಡಿಗಾಸು ಹಣ ಸಹ ಕೊಟ್ಟಿಲ್ಲ. ನಮ್ಮ ಸಂಸ್ಥೆಗಳಿಗೆ ಹಿಂದಿನ ಎರಡು ವರ್ಷಗಳ ಶುಲ್ಕವೇ ಇನ್ನು ಬಂದಿಲ್ಲ. ಈ ವರ್ಷವೂ ಹಣ ಬಿಡುಗಡೆ ಮಾಡಿಲ್ಲದೇ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿಸಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ತೊಂದರೆ ನೀಡಬೇಕೆಂಬ ಸ್ಯಾಡಿಸ್ಟ್ ಮನೋಭಾವ ಹೊಂದಿದ್ದಾರೆ. ಕೆಲ ಪೋಷಕರು ಅಲ್ಪ ಪ್ರಮಾಣದ ಶುಲ್ಕ ಕಟ್ಟಿ ಮಕ್ಕಳಿಗೆ ಆನ್ಲೈನ್ ತರಗತಿ ಕೊಡಿಸುತ್ತಿದ್ದಾರೆ. ಸಮಸ್ಯೆಯನ್ನು ಹೇಳಿಕೊಳ್ಳಲು ಶಿಕ್ಷಣ ಸಚಿವರು ಸಿಗುವುದಿಲ್ಲ. ಅವರು ಫೇಸ್ಬುಕ್ ಹಾಗೂ ಟ್ವಿಟರ್ನಲ್ಲಿ ಮಾತ್ರ ಸಿಗುತ್ತಿದ್ದಾರೆ. ಪಾಪ ಅವರು ಬಹಳ ಒಳ್ಳೆಯವರು. ಆದ್ರೆ ಅವರು ಅಸಹಾಯಕರಾಗಿದ್ದಾರೆ ಎಂದು ವ್ಯಂಗ್ಯವಾಡಿದ ಅವರು, ಕೊರೊನಾ ಬಳಿಕ ಖಾಸಗಿ ಶಾಲೆಯ ಶೇ.50 ರಷ್ಟು ಶಿಕ್ಷಕರು ಕೆಲಸ ಕಳೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ : ರಾಜ್ಯದಲ್ಲಿ ಶಾಲೆ ಆರಂಭ ವಿಚಾರವಾಗಿ ಮುಖ್ಯಮಂತ್ರಿಗಳ ನಿರ್ಧಾರವೇ ಅಂತಿಮ : ಸಚಿವ ಸುರೇಶ್ ಕುಮಾರ್
ಸಚಿವರು ಖಾಸಗಿ ಶಾಲೆಗಳ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಉಳಿಸಲು ಇದುವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ಕೂಡಲೆ ಆರ್ಟಿಇ ಹಣ ಮರುಪಾವತಿ ಮಾಡಲು ಮುಂದಾಗಬೇಕು. ಇಲ್ಲದಿದ್ದರೇ, ಮತ್ತೆ ಉಗ್ರ ಹೋರಾಟಕ್ಕೆ ತಯಾರು ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಓದಿದರೆ ಭಾಗ್ಯಲಕ್ಷ್ಮಿ ಬಾಂಡ್ ಸಿಗಲ್ಲ ಎನ್ನಲಾಗಿದೆ. ಖಾಸಗಿ ಶಾಲೆಯಿಂದ ಟಿ.ಸಿ. ತಂದರೆ ಸರ್ಕಾರಿ ಶಾಲೆಯಲ್ಲಿ ವಿದ್ಯಾಗಮ ತರಗತಿ ಮಾಡಬಹುದು ಅಂತಾರೆ. ಆದ್ರೆ ರಾಜ್ಯದ ಬಹುತೇಕ ಖಾಸಗಿ ಶಾಲೆಗಳು ಕಡಿಮೆ ಶುಲ್ಕಕ್ಕೆ ಶಿಕ್ಷಣ ನೀಡುತ್ತಿವೆ ಎಂಬುದು ತಮಗೆ ಅರಿವಿರಲಿ ಎಂದರು.
ಜನವರಿಯಿಂದ ಶಾಲೆಗಳನ್ನ ತೆರೆಯಬೇಕೆಂಬ ಸರ್ಕಾರದ ನಿರ್ದಾರದ ಬಗ್ಗೆ ಮಾತನಾಡಿದ ಅವರು, ನಾವು ಶಾಲೆ ಓಪನ್ ಮಾಡಬೇಕು ಎಂದಾದರೆ ಸರ್ಕಾರ ಶಿಕ್ಷಕರಿಗೆ ಉಚಿತ ಕೋವಿಡ್ ಪರೀಕ್ಷೆ ನಡೆಸಬೇಕು. ಇವರು ಕೋವಿಡ್-19 ಪರೀಕ್ಷೆ ಮಾಡಿಸಿದರೆ 72 ಗಂಟೆಯಲ್ಲಿ ವರದಿ ಬರುತ್ತೆ ಅಂತಾರೆ. ಆದ್ರೆ ವಾಸ್ತವದಲ್ಲಿ ವರದಿ ಬರೋಕೆ ಕನಿಷ್ಟ 10 ದಿನ ಆಗುತ್ತದೆ. 10ನೇ ಮತ್ತು ಪಿಯು ವಿದ್ಯಾರ್ಥಿಗಳಿಗೆ ಸೋಂಕು ಬಂದರೆ ಅಂತಹ ಮಕ್ಕಳಿಗೆ ಯಾವ ರೀತಿಯ ಕ್ವಾರಂಟೈನ್ ಮಾಡಬೇಕೆಂಬುದರ ಬಗ್ಗೆ ಉತ್ತರ ನೀಡಿಲ್ಲ. ಸರ್ಕಾರ ಶಾಲೆ ತೆರೆಯಲು ನಿಗದಿಮಾಡಿರೋ ಮಾರ್ಗಸೂಚನೆಯೇ ಸರಿಯಿಲ್ಲ. ರಾಜ್ಯದಲ್ಲಿ ಕೊರೊನಾದಿಂದ ಕನಿಷ್ಠ 500 ಶಾಲೆಗಳು ಬಂದ್ ಆಗಿದ್ದು, 3ಸಾವಿರಕ್ಕೂ ಹೆಚ್ಚು ನರ್ಸರಿ ಶಾಲೆಗಳು ಆರ್ಥಿಕ ಸಂಕಷ್ಟದಿಂದ ಮುಚ್ಚೋ ಪರಿಸ್ಥಿತಿ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.