ಹಾಸನ: ದಶಕಗಳಿಂದ ಮೀಸಲಾಗಿದ್ದ ಜಮೀನನ್ನ ಪುರಸಭಾ ಅಧಿಕಾರಿಗಳು ಏಕಾಏಕಿ ಜೆಸಿಬಿ ಮೂಲಕ ತೆರವುಗೊಳಿಸಿ ನಮ್ಮನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದಲಿತ ಮುಖಂಡರು ಆರೋಪ ಮಾಡಿದ್ದಾರೆ.
ಏನಿದು ಪ್ರಕರಣ:
ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಚಿಟ್ಟನಹಳ್ಳಿ ಗ್ರಾಮದ ಸರ್ವೆ ನಂಬರ್ 59/P9ರಲ್ಲಿರುವ 8 ಎಕರೆ ಸರ್ಕಾರಿ ಗೋಮಾಳದ ಜಮೀನನ್ನು ಐದಾರು ದಶಕಗಳಿಂದ ದಲಿತರು ಉಳುಮೆ ಮಾಡಿಕೊಂಡು ಬರುತ್ತಿದ್ದರು. 1992-93 ರಲ್ಲಿ ದಿವಂಗತ ಮಾಜಿ ಸಚಿವ ಪುಟ್ಟಸ್ವಾಮಿಗೌಡರು ದಲಿತ ಕುಂಟುಂಬದವರ ವಾಸ ಯೋಗಕ್ಕೆ ಅದೇ ಗ್ರಾಮದ ಅದೇ ಸರ್ವೇ ನಂಬರಿನ 8 ಎಕರೆ ಜಮೀನನ್ನು ವಸತಿಗಾಗಿ ದಲಿತ ಕುಟುಂಬಗಳಿಗೆ ಮಂಜೂರು ಮಾಡಿಸಿಕೊಟ್ಟಿದ್ದರು ಎನ್ನಲಾಗಿದೆ.
ಆದರೆ 3 ದಶಕಗಳ ಬಳಿಕ ಪುರಸಭಾ ಅಧಿಕಾರಿಗಳು ಜಲ ಶುದ್ಧೀಕರಣ ಘಟಕಕ್ಕೆ ಅದನ್ನು ನಗರ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ಇಲಾಖೆಗೆ ಹಸ್ತಾಂತರ ಮಾಡಿದ್ದು, ದಲಿತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಶಾಸಕ ಎಚ್. ಡಿ. ರೇವಣ್ಣ ಕೂಡ ಸಾಥ್ ನೀಡಿ ಖುದ್ದು ಸ್ಥಳಕ್ಕೆ ಬಂದು ನಾವು ಬೆಳೆದಿದ್ದ ಕೃಷಿ ಬೆಳೆಗಳನ್ನು ಜೆಸಿಬಿ ಮೂಲಕ ನಾಶಪಡಿಸಿ ಅತಿಕ್ರಮವಾಗಿ ತೆರವುಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ಹೊಳೆನರಸೀಪುರ ತಾಲೂಕಿನ ಚಿಟ್ಟನಹಳ್ಳಿ ಗ್ರಾಮದಲ್ಲಿ ಸುಮಾರು 2000ಕ್ಕೂ ಅಧಿಕ ದಲಿತರು ವಾಸವಾಗಿದ್ದು, ಆಶ್ರಯ ಮನೆಗಳಿಗೆ ನೀಡಿದ್ದ ಜಮೀನಿನಲ್ಲಿ ಮನೆ ಕಟ್ಟಿಕೊಳ್ಳಲು ಸಾಧ್ಯವಾಗದೆ ಬದುಕಿಗಾಗಿ ಉಳುಮೆ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ಪರಿಶಿಷ್ಟ ಮತ್ತು ಜಾತಿ ಮತ್ತು ಪಂಗಡದವರ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಸೌಲಭ್ಯ ಮತ್ತು ಅನುದಾನವನ್ನು ನೀಡುತ್ತಿದೆ. ಆದರೆ ನಮ್ಮ ಬದುಕಿಗಾಗಿ ಇದ್ದ ತುಂಡು ಭೂಮಿಯನ್ನು ಕೂಡ ಶಾಸಕರ ನೇತೃತ್ವದಲ್ಲಿ ಪುರಸಭೆ ಅಧಿಕಾರಿಗಳು ವಶಪಡಿಸಿಕೊಳ್ಳುತ್ತಿದೆ. ಇದರಿಂದ ನಾವು ಬೀದಿಗೆ ಬರುವ ಸ್ಥಿತಿಗೆ ಅಧಿಕಾರಿಗಳು ತರುತ್ತಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಪೌರಾಡಳಿತ ಮತ್ತು ಕಂದಾಯ ಸಚಿವರುಗಳಿಗೆ ದೂರು ಸಲ್ಲಿಸಿ ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
"ಸರ್ಕಾರಿ ಗೋಮಾಳವನ್ನು ಹಸ್ತಾಂತರ ಮಾಡಿದ್ದೇವೆ ಅಷ್ಟೇ":ಆದರೆ ಪುರಸಭೆಯವರು ಹೇಳುವ ಪ್ರಕಾರ ಇದು ಸರ್ಕಾರಿ ಜಮೀನು. ಇವರುಗಳೇ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಅತಿಕ್ರಮವಾಗಿ ಕೃಷಿ ಚಟುವಟಿಕೆ ಮಾಡಿಕೊಂಡು ಬರುತ್ತಿದ್ದರು. ಕುಡಿಯುವ ನೀರು ಮತ್ತು ಶುದ್ಧೀಕರಣ ಘಟಕ ಯೋಜನೆ ಕಾಮಗಾರಿ ಪ್ರಾರಂಭವಾಗಿರುವುದರಿಂದ ಸರ್ಕಾರಿ ಗೋಮಾಳ ಜಮೀನನ್ನು ನಗರ ಕುಡಿಯುವ ನೀರು ಮತ್ತು ಜಲಮಂಡಳಿಗೆ ಹಸ್ತಾಂತರ ಮಾಡಿದ್ದೇವೆ ಎನ್ನುತ್ತಾರೆ.
ಒಟ್ಟಾರೆ ದಲಿತ ಕುಟುಂಬಗಳು ಪುರಸಭೆಯ ಅಧಿಕಾರಿಗಳ ವಿರುದ್ಧ ಬೃಹತ್ ಪ್ರತಿಭಟನೆ ಮಾಡಲು ಮುಂದಾಗಿದ್ದು, ಸರ್ವೆ ನಂಬರ್ 59/P9ರ ವಿವಾದಿತ ಜಮೀನು ದಲಿತ ಕುಟುಂಬಕ್ಕೆ ಸೇರಿದೆಯಾ.? ಅಥವಾ ಅದು ಸರ್ಕಾರಿ ಗೋಮಾಳವೇ ಎಂಬುದನ್ನ ಜಿಲ್ಲಾಧಿಕಾರಿಗಳು ಅಥವಾ ಕಂದಾಯ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಪ್ರಕರಣಕ್ಕೆ ಇತಿಶ್ರೀ ಹಾಡಬೇಕಿದೆ.