ಹಾಸನ: ಹಾಸನಾಂಬೆ ದೇವಿಗೆ ಪ್ರತಿ ವರ್ಷದಂತೆ ಈ ವರ್ಷವು ಕೂಡ ನಟಿ ತಾರಾ ಬಾಗಿನ ಅರ್ಪಿಸಿ, ತಾಯಿಯ ದರ್ಶನ ಪಡೆದರು.
ದೇವಿಯ ದರ್ಶನದ ಬಳಿಕ ಮಾತನಾಡಿದ ತಾರಾ, ಪ್ರತೀ ವರ್ಷ ಇಲ್ಲಿಗೆ ಬಂದು ಪೂಜೆ ಸಲ್ಲಿಸುವ ನನಗೆ ವೈಯಕ್ತಿಕ ಕಾರಣಗಳಿಂದ ಕಳೆದ ವರ್ಷ ಬರಲಾಗಲಿಲ್ಲ. ಆ ಕಾರಣಕ್ಕೆ ಬಹಳ ಬೇಜಾರಾಗಿತ್ತು. ಈಗ ಮತ್ತೆ ಅಷ್ಟಮಿ ದಿನ ತಾಯಿಯ ದರ್ಶನ ಪಡೆದಿರುವುದು ನಿರಾಳ ಎನಿಸುತ್ತಿದೆ ಎಂದರು.
ಇನ್ನು ನಾನು ಇದುವರೆಗೂ ಬೇಡಿಕೊಂಡಿದ್ದನ್ನು ತಾಯಿ ಈಡೇರಿಸಿದ್ದಾಳೆ. ಈ ಬಾರಿಯೂ ದೇಶದ ಏಳಿಗೆ ಹಾಗೂ ನನ್ನ ವೈಯಕ್ತಿಕ ಇಚ್ಛೆಗಳನ್ನು ಹರಸಿಕೊಂಡಿದ್ದೇನೆ. ಆ ತಾಯಿಯ ಮೇಲೆ ನಂಬಿಕೆ ಇದೆ ಎಂದು ಹೇಳಿದರು.
ಇಲ್ಲಿಗೆ ಭೇಟಿ ನೀಡಿದ ನಾನು ದೇವಿ ಜೊತೆಗೆ ಸಾಕಷ್ಟು ಅಭಿಮಾನಿಗಳನ್ನು ಕಂಡಿದ್ದು ಸಂತೋಷ ಕೊಟ್ಟಿದೆ. ತಾಯಿ ಎಲ್ಲರನ್ನೂ ಕಾಪಾಡುತ್ತಾಳೆ ಎಂದರು. ಈ ವೇಳೆ ಭಕ್ತರು ನಟಿ ತಾರಾ ಅವರ ಜತೆ ಸೆಲ್ಫಿ ತೆಗೆದುಕೊಂಡರು.