ಹಾಸನ: ನಟ ಪುನೀತ್ ರಾಜ್‌ಕುಮಾರ್ ಅಕಾಲಿಕ ನಿಧನದಿಂದ ನೊಂದು ಹಾಸನದಲ್ಲಿ ವ್ಯಕ್ತಿಯೊಬ್ಬರು ಸಾವಿಗೆ ಶರಣಾಗಿದ್ದಾರೆ.
ಇಲ್ಲಿನ ಡಾ.ರಾಜ್‌ಕುಮಾರ್ ಸಂಘದ ಜಿಲ್ಲಾ ಅಧ್ಯಕ್ಷರಾಗಿದ್ದ ದಿ.ಹಾ.ರಾ.ನಾಗರಾಜ್ ಅವರ ಕಿರಿಯ ಪುತ್ರ ಮಯೂರ ನಾಗರಾಜ್ (34) ಎಂಬವರು ನೇಣಿಗೆ ಶರಣಾಗಿದ್ದಾರೆ.
ಹಾಸನದ ರಾಜ್‌ಕುಮಾರ್ ನಗರದ ನಿವಾಸಿಯಾಗಿರುವ ಮಯೂರ ನಾಗರಾಜ್ ಅವರು ಪುನೀತ್ ಅವರ ಅಪ್ಪಟ ಅಭಿಮಾನಿಯಂತೆ. ಪುನೀತ್ ನಿಧನದಿಂದ ನಾಗರಾಜ್ ಚಿಂತೆಗೀಡಾಗಿದ್ದು, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಆ ಬಳಿಕ, ಸರಿಯಾಗಿ ತಿಂಡಿ-ಊಟವನ್ನೂ ಮಾಡುತ್ತಿರಲಿಲ್ಲ. ಪದೇ ಪದೇ ಅಪ್ಪು ಸಾವಿನ ಬಗ್ಗೆಯೇ ಮಾತನಾಡುತ್ತಿದ್ದರು ಎಂದು ತಿಳಿದುಬಂದಿದೆ.
ಬುಧವಾರ ತಮ್ಮ ಮನೆಯಲ್ಲಿ ತಾಯಿ ಹಾಗೂ ಪತ್ನಿ ಇದ್ದ ವೇಳೆಯೇ ಕೊಠಡಿಗೆ ತೆರಳಿದ ಮಯೂರ ನಾಗರಾಜ್ ನೇಣು ಬಿಗಿದುಕೊಂಡಿದ್ದಾರೆ. ಇದನ್ನು ಕಂಡ ಮನೆಯವರು ನೆರೆ ಮನೆಯವರ ಸಹಕಾರದಿಂದ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ನಗರದ ಪೆನ್ಸನ್ ಮೊಹಲ್ಲಾ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.