ಹಾಸನ: ಅರಕಲಗೂಡು ವೃತ್ತ ಪೊಲೀಸರು ಯಶಸ್ವಿ ಕಾರ್ಯಚರಣೆ ನಡೆಸಿ, ಸುಲಿಗೆ ಪ್ರಕರಣದ ಆರೋಪಿಯನ್ನು ಬಂಧಿಸಿ ಆತನಿಂದ 5 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀನಿವಾಸ್ ಗೌಡ ತಮ್ಮ ಕಛೇರಿ ಸಭಾಂಗಣದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿ, ಮೈಸೂರು ಜಿಲ್ಲೆ ಪಿರಿಯಪಟ್ಟಣ ತಾಲೂಕಿನ ಹಲಗನಹಳ್ಳಿ ಗ್ರಾಮದ ವ್ಯಾಪಾರ ವೃತ್ತಿ ಮಾಡುವ ಇರ್ಫಾನ್ ಅಹಮ್ಮದ್ (40) ಎಂಬ ಆರೋಪಿಯನ್ನು ಬಂಧಿಸಿ ಮಾಲು ವಶಪಡಿಸಿಕೊಳ್ಳಲಾಗಿದೆ ಎಂದರು.
ಕಳೆದ ತಿಂಗಳು 26ರಂದು ಪಿರಿಯಾಪಟ್ಟಣ ತಾಲೂಕು, ಬೆಟ್ಟದಪುರ ಹೋಬಳಿ, ಹಲಗನಹಳ್ಳಿ ಗ್ರಾಮದ ವಾಸಿ ಸಯ್ಯದ್ ಯಾಕೂಬ್ ಬಿನ್ ಲೇಟ್ ಸಯ್ಯದ್ ಲತೀಫ್ ಎಂಬುವವರು, ರಾಮನಾಥಪುರ ಹೋಬಳಿ ಮಲ್ಲಾಪುರ ಗ್ರಾಮದಲ್ಲಿರುವ ತಮ್ಮ ಜಮೀನಿನ ಶೆಡ್‌ನಲ್ಲಿ ಮಲಗಿದ್ದಾಗ ಆಡು-ಕುರಿ ವ್ಯಾಪಾರದ ಸಲುವಾಗಿ 5,99,980ರೂ. ಹಾಸಿಗೆ ದಿಂಬಿನಲ್ಲಿ ಇಟ್ಟುಕೊಂಡಿದ್ದನ್ನು ಸುಲಿಗೆ ಮಾಡಲಾಗಿತ್ತು.
ಯಾರೋ ಇಬ್ಬರು ಮುಖಕ್ಕೆ ಬಟ್ಟೆ ಸುತ್ತಿಕೊಂಡಿದು, ಕೈಗವಸು ಹಾಕಿಕೊಂಡು ಏಕಾಏಕಿ ಶೆಡ್‌ನೊಳಗೆ ನುಗ್ಗಿ ಕಣ್ಣಿಗೆ ಖಾರದ ಪುಡಿ ಎರಚಿ, ಹಲ್ಲೆ ಮಾಡಿ ಹಣ ದೋಚಿ, ಕೈ ಕಾಲುಗಳಿಗೆ ಹಗ್ಗದಿಂದ ಕಟ್ಟಿ ಹಾಕಿ ಪರಾರಿಯಾಗಿದ್ದರು.
ಕೊಣನೂರು ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಆರೋಪಿಗಳ ಪತ್ತೆಗಾಗಿ ಅಪರ ಪೊಲೀಸ್ ಅಧೀಕ್ಷಕ ನಂದಿನಿರವರ ಮೇಲುಸ್ತುವಾರಿಯಲ್ಲಿ ಹೊಳೆನರಸೀಪುರ ಡಿವೈಎಸ್‌ಪಿ ಲಕ್ಷ್ಮೇಗೌಡರವರ ಉಸ್ತುವಾರಿಯಲ್ಲಿ, ಅರಕಲಗೂಡು ವೃತ್ತ ಸಿಪಿಐ ವೈ. ಸತ್ಯನಾರಾಯಣ ನೇತೃತ್ವದಲ್ಲಿ ಕೊಣನೂರು ಪಿಎಸ್‌ಐ ಸಾಗರ್ ಮತ್ತು ಸಿಬ್ಬಂದಿ ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಅಂತಿಮವಾಗಿ ಹಲಗನಹಳ್ಳಿ ಗ್ರಾಮದಲ್ಲಿದ್ದ ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಯಿತು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀನಿವಾಸ್ ಗೌಡ ಹೇಳಿದರು.
ಆರೋಪಿಯೊಂದಿಗೆ ಆತನ ಸ್ನೇಹಿತ ಸಯ್ಯದ್ ಮುಬೀನ್ ಸದ್ದಾಂ ಸೇರಿಕೊಂಡಿದ್ದು, ಪೂರ್ವನಿಯೋಜಿತ ದಾಳಿ ಮಾಡಿ ದರೋಡೆ ಮಾಡಿದ್ದಾಗಿ ಒಪ್ಪಿಕೊಂಡಿರುವುದಾಗಿ ತಿಳಿಸಿದರು. ಸೈಯದ್ ಮುಬೀನ್ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಮುಂದುವರೆದಿದೆ. ಉಳಿದ 99,980 ರೂ.ವನ್ನು ಆತನಿಂದ ವಶಪಡಿಸಿಕೊಳ್ಳಬೇಕಾಗಿದೆ ಎಂದರು.
ಕಾರ್ಯಚರಣೆಗೆ ಶ್ರಮವಹಿಸಿದ ಸಿಬ್ಬಂದಿ ಪ್ರಕಾಶ, ರಾಜಶೆಟ್ಟಿ, ಸುರೇಶ, ಸಣೇಗೌಡ, ಶಿವಕುಮಾರ, ನಂದೀಶ, ನವೀನ್‌ಕುಮಾರ, ಮಹೇಶ, ಚೇತನ್ ಕುಮಾರ್, ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ಎ.ಹೆಚ್.ಸಿ. ಪೀರ್‌ಖಾನ್ ಚಾಲಕರಾದ ಜಗನ್ನಾಥ್, ಹೇಮಚಂದ್ರ ಇವರ ಕಾರ್ಯವನ್ನು ಎಸ್‌ಪಿಯವರು ಪ್ರಶಂಶಿಸಿ ವಿಶೇಷ ಬಹುಮಾನ ಘೋಷಿಸಿದರು.