ಹಾಸನ: ರಾಷ್ಟ್ರೀಯ ಹೆದ್ದಾರಿ 75ರ ಸಂಪೂರ್ಣ ಮರು ಡಾಂಬರೀಕರಣಕ್ಕೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಅಕ್ಟೋಬರ್ 12ರಂದು (ಸೋಮವಾರ) ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಜಿಲ್ಲಾಧ್ಯಕ್ಷ ಮನುಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ 75ರ ದುರಸ್ತಿ ಹೆಸರಿನಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಜೇಬು ತುಂಬಿಸುವ ಕೆಲಸ ನಡೆಯುತ್ತಿದೆ. ಹಾಸನದಿಂದ ಮಾರನಹಳ್ಳಿವರೆಗೆ 55 ಕಿ.ಮೀ. ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಬೆಂಗಳೂರು ಹಾಗೂ ಮಂಗಳೂರು ಸಂಪರ್ಕಿಸುವ ರಸ್ತೆ ದುರಸ್ತಿಗೆ ಆಗ್ರಹಿಸಿ ತಾಲೂಕಿನ ಬಾಳುವ ಗ್ರಾಮದಲ್ಲಿ ಮೂರು ದಿನ ಪ್ರತಿಭಟನೆ ನಡೆಸಲಾಗುವುದು ಎಂದರು.
ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದು ಅಂದು ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರು ಲೋಕೋಪಯೋಗಿ ಸಚಿವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಹಾಗೂ ಹೋರಾಟಗಾರರ ಸಭೆ ಕರೆದು ಚತುಷ್ಪತ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಬಳಿಕ ಗುಂಡಿಮುಚ್ಚಿ ತಾತ್ಕಾಲಿಕ ದುರಸ್ತಿ ಮಾಡಿಸಿದ್ದರು. ಈ ರೀತಿ ಅವೈಜ್ಞಾನಿಕವಾಗಿ ಕೆಲಸಮಾಡುವ ಬದಲು ಸಂಪೂರ್ಣವಾಗಿ ಮರು ಡಾಂಬರೀಕರಣ ಕಾಮಗಾರಿ ಆರಂಭಿಸಬೇಕು ಎಂದರು.
ಸೋಮಾವಾರ ಬೆಳಗ್ಗೆ 10ಕ್ಕೆ ಆಲೂರು ತಾಲೂಕು ಪಾಳ್ಯ ಹೋಬಳಿಯಲ್ಲಿ ಕರವೇ ವತಿಯಿಂದ ಪ್ರತಿಭಟನೆ ನಡೆಸಲಿದ್ದು, ಬಾಳ್ಳುಪೇಟೆಯಲ್ಲಿ ಸಮಾವೇಶ ನಡೆಯಲಿದೆ ಎಂದರು.