ಹಾಸನ: 2019 ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಒಂದು ವಾರದೊಳಗೆ ವರದಿ ನೀಡುವಂತೆ ಚುನಾವಣಾ ಆಯೋಗ ಹಾಸನ ಜಿಲ್ಲಾಧಿಕಾರಿಗೆ ನೊಟೀಸ್ ನೀಡಿದೆ ಎಂದು ಮಾಜಿ ಸಚಿವ ಎ.ಮಂಜು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಪ್ರಜ್ವಲ್ ರೇವಣ್ಣ ಚುನಾವಣಾ ಆಯೋಗಕ್ಕೆ ಸುಳ್ಳು ಪ್ರಮಾಣಪತ್ರ ಸಲ್ಲಿಸಿರುವ ಬಗ್ಗೆ ನಾನು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿದ್ದೇನೆ. ಈ ವಿಷ್ಯಕ್ಕೆ ಸಂಬಂಧಿಸಿದಂತೆ ಒಂದು ವಾರದಲ್ಲಿ ವರದಿ ನೀಡುವಂತೆ ಇದೀಗ ಚುನಾವಣಾ ಆಯೋಗದಿಂದ ಹಾಸನ ಜಿಲ್ಲಾಧಿಕಾರಿಗೆ ನೊಟೀಸ್ ನೀಡಲಾಗಿದೆ. ಈ ಬಗ್ಗೆ ಹಾಸನ ಜಿಲ್ಲಾಧಿಕಾರಿಯವರು ಸರಿಯಾಗಿ ವರದಿ ನೀಡುವಂತೆ ಮಾಜಿ ಸಚಿವ ಎ.ಮಂಜು ಮನವಿ ಮಾಡಿದ್ದಾರೆ.
ಮತ್ತೆ ನಾನೇ ಸಂಸದನಾಗುತ್ತೇನೆ ಎಂದು ಈಗಲೂ ನನಗೆ ಭರವಸೆ ಇದೆ. ಯಾಕೆಂದರೆ ಮಹಾರಾಷ್ಟ್ರದಲ್ಲಿ ಓರ್ವ ಶಾಸಕರು ಇದೇ ರೀತಿ ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದು, ಮಹಾರಾಷ್ಟ್ರ ಚುನಾವಣಾ ಆಯೋಗವೇ ಕ್ರಮ ಕೈಗೊಂಡು ಆ ಶಾಸಕರ ಸದಸ್ಯತ್ವ ವಜಾಗೊಳಿಸಿದೆ. ಅದೇ ರೀತಿ ಈ ಪ್ರಕರಣದಲ್ಲಿ ನನಗೆ ನ್ಯಾಯ ಸಿಗಲಿದೆ ಎಂದು ತಿಳಿಸಿದರು.
ಹೈಕೋರ್ಟ್ ಆದೇಶ ಪ್ರಶ್ನಿಸಿ ನಾನು ಸುಪ್ರೀಂಕೋರ್ಟ್ಗೆ ಮೊರೆ ಹೋಗಿದ್ದೇನೆ. ಅಲ್ಲಿ ನಾನು ಗೆಲ್ಲುವ ಭರವಸೆ ಇದೆ ಎಂದು ಎ.ಮಂಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.