ಹಾಸನ: ಮಾಜಿ ಸಚಿವ ಎ.ಮಂಜುರವರು ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿ ವಿಶೇಷವಾದ ಸೇವೆಗಳನ್ನು ಸಮಾಜಕ್ಕೆ ನೀಡುತ್ತಿದ್ದಾರೆ. ಅದರಲ್ಲೂ ಅರಕಲಗೂಡು ತಾಲೂಕಿಗೆ ರಸ್ತೆಗಳು ಹಾಗೂ ಸಾಮಾಜಿಕ ಸೇವೆಗಳನ್ನು ಅತ್ಯಂತ ಯಶಸ್ವಿಯಾಗಿ ನೀಡಿರುವ ನಾಯಕರು. ಅವರ ಮೇಲೆ ಭಗವಂತನ ಪೂರ್ಣ ಕೃಪೆಯಿರುವುದರಿಂದ ಮುಂದಿನ ದಿನಗಳಲ್ಲಿ ಎ. ಮಂಜುರವರ ರಾಜಕೀಯ ಜೀವನ ಉತ್ತುಂಗಕ್ಕೆ ಹೋಗಲಿ ಎಂದು ಅರೇಮಾದನಹಳ್ಳಿ ಮಹಾಸಂಸ್ಥಾನ ಮಠದ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ ಆಶೀರ್ವದಿಸಿದರು.
ರಾಮನಾಥಪುರದ ಪಟ್ಟಾಭಿರಾಮ ಪ್ರೌಢಶಾಲಾ ಆವರಣದಲ್ಲಿ ಎ. ಮಂಜು ಅಭಿಮಾನಿಗಳ ಬಳಗ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಮಾಜಿ ಸಚಿವ ಮಂಜು ಹುಟ್ಟುಹಬ್ಬ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯೋತ್ಸವದೊಂದಿಗೆ ಎ.ಮಂಜುರವರ ಹುಟ್ಟುಹಬ್ಬ ಆಚರಣಾ ಕಾರ್ಯಕ್ರಮ ಜಿಲ್ಲೆಯಲ್ಲಿಯೇ ವಿಶೇಷತೆಯಿಂದ ಕೂಡಿದೆ. ಈ ಕಾರ್ಯಕ್ರಮ ಮಾಡಿಕೊಂಡು ಬರುತ್ತಿರುವ ಅವರ ಅಭಿಮಾನಿಗಳಿಗೂ ಸಹ ದೇವರು ಒಳಿತನ್ನು ಮಾಡಲಿ ಎಂದ್ರು.
ಮಾಜಿ ಸಚಿವ ಎ.ಮಂಜು ಮಾತನಾಡಿ, ಅರಕಲಗೂಡು ತಾಲೂಕು ಜನರು ನನ್ನನು 2 ಬಾರಿ ಶಾಸಕರನ್ನಾಗಿ ಮಾಡಿದ್ದಾರೆ. ರಾಜಕೀಯದಲ್ಲಿ ನನಗೆ ಯಾರೂ ಶತ್ರುಗಳು ಇಲ್ಲ. ಹೊಳೆನರಸಿಪುರ ಮಾದರಿಯಲ್ಲಿ ಅರಕಲಗೂಡು ತಾಲೂಕು ಅಭಿವೃದ್ಧಿ ಮಾಡಿದ್ದೇನೆ. ನ.1 ನನ್ನ ಜನ್ಮ ದಿನವಾಗಿದ್ದು ನನಗೆ ಜನ್ಮ ನೀಡಿದ ನನ್ನ ತಂದೆ ತಾಯಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ರಾಜಕೀಯಕ್ಕೆ ಹಣ ಮಾಡಲು ಬಂದಿಲ್ಲ ಸೇವೆ ಮಾಡಲು ಬಂದಿದ್ದೇನೆ. ನನ್ನ ಕನಸಾಗಿದ್ದ ಕಸಬಾ ಹೋಬಳಿ ದೊಡ್ಡಮಗ್ಗೆ ಏತ ನೀರಾವರಿ ಯೋಜನೆಯನ್ನು ನನ್ನ ಅಧಿಕಾರಾವಧಿಯ 1 ವರ್ಷದಲ್ಲಿ ಪೂರ್ಣಗೊಳಿಸಿದ್ದೇನೆ. ನಮ್ಮ ನಾಯಕ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಈಗ ಕಣಿಯಾರು, ಕೊಣನೂರು ಏತ ನಿರಾವರಿ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸಲಾಗುವುದು ಎಂದರು.