ಹಾಸನ: ಪತ್ನಿಗೆ ಮೆಸೇಜ್ ಮಾಡಿದ ಸಂಬಂಧ ಪತಿಯೊಬ್ಬ ಟೈಲರ್‌ನ್ನು ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಮೃತ ವ್ಯಕ್ತಿ ಊಪಿನಹಳ್ಳಿ ಗ್ರಾಮದ ಗಂಗಾಧರ್ (40) ಎಂದು ಗುರುತಿಸಲಾಗಿದೆ. ಭರತ್ ಕೊಲೆ ಮಾಡಿದ ಆರೋಪಿ.
ಭರತ್ ಪತ್ನಿಗೆ ಗಂಗಾಧರ್ ಪದೇ ಪದೇ ಮೆಸೇಜ್ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಇದೇ ವಿಷಯವಾಗಿ ಭರತ್, ಸೋಮು, ಚಿರು, ಅಭಿ ಎಂಬ ನಾಲ್ವರು ಗಂಗಾಧರ್ನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಂತಕರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಗಂಗಾಧರ್ನನ್ನು ಕಿಡ್ನ್ಯಾಪ್ ಮಾಡಿದ ಬಳಿಕ ಶ್ರವಣಬೆಳಗೊಳ ರಸ್ತೆಯ ಜನಿವಾರ ಸಮೀಪದ ಬಯಲು ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಗಂಗಾಧರ್ ಸ್ನೇಹಿತ ಇದನ್ನ ಗಮನಿಸಿ ಹತ್ತಿರ ಹೋದಾಗ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಕೂಡಲೇ ಗಂಗಾಧರ್ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ಮುಂದಾಗುವಷ್ಟರಲ್ಲಿ ಆತ ಅಲ್ಲಿಯೇ ಉಸಿರು ಚಲ್ಲಿದ್ದಾನೆ.
ದಶಕಗಳಿಂದ ಟೈಲರಿಂಗ್ ವೃತ್ತಿ ಮಾಡಿಕೊಂಡಿದ್ದ ಗಂಗಾಧರ್ ನಾಲ್ಕೈದು ಮಂದಿಗೆ ಕೆಲಸಕೊಟ್ಟು ಜೀವನ ನಡೆಸುತ್ತಿದ್ದ. ಯಾರೊಟ್ಟಿಗೂ ಜಗಳವಾಡದ ವ್ಯಕ್ತಿ ಹೀಗೆ ಏಕಾಏಕಿ ಹತ್ಯೆಯಾಗಿರುವುದು ಊರಿಗೆ ಊರೇ ಬೆಚ್ಚಿ ಬೀಳುವಂತೆ ಮಾಡಿದೆ.
ಸದ್ಯ ಗಂಗಾಧರ್ ಪತ್ನಿ ಸೌಮ್ಯ ನೀಡಿದ ದೂರಿನ ಆಧಾರದಲ್ಲಿ ಕೇಸ್ ದಾಖಲಿಸಿಕೊಂಡಿರುವ ಚನ್ನರಾಯಪಟ್ಟಣ ನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕೊಲೆ ಆರೋಪಿ ಭರತ್ ಅನುಮಾನಿಸಿದಂತೆ ಗಂಗಾಧರ್ ಮೆಸೇಜ್ ಮಾಡಿದ್ದಾನೆ. ಪ್ರಾಣ ತೆಗೆದ ಆ ಮೆಸೇಜ್ನಲ್ಲಿ ಏನಿತ್ತು?.. ಟೈಲರ್ ಸಾವಿನ ಹಿಂದಿನ ಅಸಲಿಯತ್ತೇನು?.. ಎನ್ನುವುದು ಹಂತಕರ ಬಂಧನದ ಬಳಿಕ ಸತ್ಯ ಹೊರ ಬರಲಿದೆ.
ಓದಿ: ಮಂಗಳೂರು: ಸಲಿಂಗಕಾಮಕ್ಕೆ ಕರೆದೊಯ್ದು ದುಡ್ಡು ಕೊಡದ ವೃದ್ಧ.. ಕತ್ತು ಹಿಸುಕಿ ಕೊಂದ ಯುವಕ