ಹಾಸನ (ಹೊಳೆನರಸೀಪುರ): ಕೊರೊನಾ ಮಹಾಮಾರಿಯ ನಡುವೆಯೂ ನಡೆದ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ, ಹೊಳೆನರಸೀಪುರ ತಾಲೂಕಿನ ಶಾಲೆಯ ವಿದ್ಯಾರ್ಥಿಗಳು ಶೇಕಡಾ 88.03ರಷ್ಟು ಫಲಿತಾಂಶವನ್ನು ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆಂದು ಬಿಇಒ ಲೋಕೇಶ್ ತಿಳಿಸಿದರು.
2020 ನೇ ಸಾಲಿನಿಂದ ತಾಲೂಕುವಾರು ಅಂಕಗಳಿಗೆ ಬದಲಾಗಿ ಗ್ರೇಡ್ ಗಳನ್ನು ನೀಡಲಾಗುತ್ತಿದೆ. ಈ ಬಾರಿ ಹಾಸನ ಜಿಲ್ಲೆಯ 8 ತಾಲೂಕುಗಳಲ್ಲಿ 5 ತಾಲೂಕುಗಳು 'ಎ' ಗ್ರೇಡ್ ಪಡೆದಿದ್ದು, 03 ತಾಲೂಕುಗಳು 'ಬಿ' ಗ್ರೇಡ್ ಪಡೆದಿವೆ. ಹೊಳೆನರಸೀಪುರ ತಾಲೂಕು ಈ ಬಾರಿ 'ಎ' ಗ್ರೇಡ್ ಪಡೆದಿದ್ದು, ತಾಲೂಕಿನಲ್ಲಿ 15 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ. ಇದರಲ್ಲಿ 13 ಶಾಲೆಗಳು ಸರ್ಕಾರಿ ಶಾಲೆಗಳು ಎಂಬುದು ಗಮನರ್ಹ ಎಂದರು.
2019- 20 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲೂಕಿಗೆ ಮೊದಲ ಮೂರು ವಿದ್ಯಾರ್ಥಿಗಳು ಟಾಪರ್ ಗಳಾಗಿ ಹೊರಹೊಮ್ಮಿದ್ದಾರೆ. ನಗರದ ಕೆ.ಎನ್.ಎ. ಪ್ರೌಢ ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ಆನಮ್ 625 ಅಂಕಗಳೊಂದಿಗೆ ಪ್ರಥಮ ಸ್ಥಾನ. ಗ್ರೀನ್ ವುಡ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕು.ಇಂಪನಾ 616 ಅಂಕಗಳೊಂದಿಗೆ ದ್ವಿತೀಯ ಸ್ಥಾನ. ಸರ್ಕಾರದ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ನೂರೈನ್ ಅಹಮದ್ 614 ಅಂಕಗಳೊಂದಿಗೆ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಈ ಬಾರಿ ಒಟ್ಟು 61 ಶಾಲೆಗಳಿಂದ 2098 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1847 ಅಂದರೇ ಶೇಕಡಾ 88.03 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕೊರೊನಾ ಭಯ ಬೇಡ:
ಕಲಿಕೆಯನ್ನು ಬಿಡಬೇಡ ಎಂಬ ಸಂಕಲ್ಪದೊಂದಿಗೆ 5ನೇ ತರಗತಿಗೆ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣವನ್ನು ನೀಡುತ್ತಿದ್ದು, ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಅವರನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಪ್ರೌಢಶಾಲಾ ಮಕ್ಕಳಿಗೆ ಸಂವೇದ ಎಂಬ ಅಂಶದ ಅಡಿ ಶಿಕ್ಷಣ ನೀಡುತ್ತಿದ್ದು, 8-10ನೇ ತರಗತಿ ವಿದ್ಯಾರ್ಥಿಗಳಿಗೆ ಚಂದನ ವಾಹಿನಿಯಲ್ಲಿ ನಿತ್ಯವೂ ಪಾಠ ಪ್ರವಚನಗಳನ್ನು ಪ್ರಸಾರ ಮಾಡುತ್ತಿದ್ದು, ಅವರೊಂದಿಗೆ ಶಿಕ್ಷಕರು ನಿರಂತರವಾಗಿ ಆನ್ಲೈನ್ ನಲ್ಲಿ ಸಂಪರ್ಕದಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.