ಹಾಸನ: ಹಾಸನ ಎಂದರೆ ಅದು ಜೆಡಿಎಸ್ ಭದ್ರಕೋಟೆ. ಅಂತಹ ಭದ್ರ ಕೋಟೆಯನ್ನು ಈಗ ಹಾಸನದಲ್ಲಿ ಪ್ರೀತಮ್ ಗೌಡ ಅಲುಗಾಡಿಸಲು ಹೊರಟಿದ್ದರೆ. ಅದೇ ಅರಸೀಕೆರೆಯಲ್ಲಿ ಮುಖ್ಯಮಂತ್ರಿಯ ರಾಜಕೀಯ ಆಪ್ತ ಕಾರ್ಯದರ್ಶಿ ಎಂ.ಆರ್ ಸಂತೋಷ್ ಕೂಡ ಬಿಜೆಪಿಯನ್ನೇ ಅಲುಗಾಡಿಸುವ ಮೂಲಕ ಸ್ವಪಕ್ಷೀಯ ವಲಯದಲ್ಲಿಯೇ ಬಿರುಕು ಮೂಡಿಸಿದೆ. ಅರಸೀಕೆರೆ ರಾಜಕೀಯವಲಯದಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಇಲ್ಲಿದೆ ಒಂದು ವರದಿ.
ಅರಸೀಕೆರೆ ತಾಲೂಕಿನ ಕೇಸರಿ ಪಾಳಯದಲ್ಲಿನ ಕಲಹ ಬೀದಿರಂಪವಾಗಿದೆ. ನೂರಾರು ಬಿಜೆಪಿ ಕಾರ್ಯಕರ್ತರು ಸಿಎಂ ರಾಜಕೀಯ ಆಪ್ತ ಕಾರ್ಯದರ್ಶಿ ವಿರುದ್ಧವೇ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಾಸನ ತಾಲೂಕು ಹೊರತುಪಡಿಸಿ ಉಳಿದೆಲ್ಲಾ ತಾಲೂಕುಗಳಲ್ಲೂ ತೆನೆಹೊತ್ತ ಮಹಿಳೆಯ ಅಭ್ಯರ್ಥಿಗೆಳೇ ಗೆಲುವಿನ ನಗೆ ಬೀರಿದ್ದರು. ಅರಸೀಕೆರೆ ತಾಲೂಕಿನಲ್ಲಿ 2004ರಲ್ಲಿ ಬಿಜೆಪಿ ಒಮ್ಮೆ ಮಾತ್ರ ಅಧಿಕಾರ ಹಿಡಿದಿದ್ದನ್ನು ಬಿಟ್ಟರೆ ಮತ್ತೆ ಯಾವಾಗಲೂ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಆದರೆ ಈ ಬಾರಿ ಶತಾಯಗತಾಯ ಜೆಡಿಎಸ್ ನಾಯಕರುಗಳನ್ನು ಮಣಿಸಿ ಬಿಜೆಪಿ ಬಾವುಟ ಹಾರಿಸಬೇಕೆಂದು ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಸದ್ದಿಲ್ಲದೆ ಅರಸೀಕೆರೆಗೆ ಬಂದು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಅರಸೀಕೆರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಮಾಜಿ ಅರಸೀಕೆರೆ ಗ್ರಾಮಾಂತರ ಮಂಡಲದ ಅಧ್ಯಕ್ಷರಾಗಿದ್ದ ಜಿಬಿಟಿ ಬಸವರಾಜ್ಗೆ ಒಲಿದಿತ್ತು. ಇನ್ನೇನು ಪದಗ್ರಹಣ ಕಾರ್ಯಕ್ರಮ ಮಾಡಬೇಕೆನ್ನುವಷ್ಟರಲ್ಲಿ ಅದಕ್ಕೆ ಸಿಎಂ ಆಪ್ತ ಕಾರ್ಯದರ್ಶಿ ಎಂಆರ್ ಸಂತೋಷ್ ಬ್ರೇಕ್ ಹಾಕುವ ಮೂಲಕ ತನ್ನ ಆತ್ಮೀಯರಲ್ಲಿ ಒಬ್ಬರಾದ ಎನ್.ಡಿ. ಪ್ರಸಾದ್'ಗೆ ಕೊಡಿಸುವ ಮೂಲಕ ಸ್ವಪಕ್ಷೀಯದಲ್ಲಿಯೇ ಬಿರುಕು ಮೂಡಿಸಿ ಪಕ್ಷವನ್ನು ಒಡೆಯುವ ತಂತ್ರ ಮಾಡುತ್ತಿದ್ದಾರೆ ಎನ್ನುವುದು ಜಿವಿಟಿ ಬಸವರಾಜ್ ಆರೋಪ.
ಹೀಗಾಗಿ ಎನ್.ಆರ್ ಸಂತೋಷ್ ಮೇಲೆ ಜಿವಿಟಿ ಬಸವರಾಜ್, ಮತ್ತು ಅಣ್ಣ ನಾಯಕನಹಳ್ಳಿ ವಿಜಯಕುಮಾರ್ ತಮ್ಮ ಬೆಂಬಲಿಗರೊಂದಿಗೆ ಆಪ್ತ ಕಾರ್ಯದರ್ಶಿ ಸಂತೋಷ್ ವಿರುದ್ಧ ತಿರುಗಿಬಿದ್ದು ಗೋ ಬ್ಯಾಕ್ ಗೋ ಬ್ಯಾಕ್ ಎನ್ನುವ ಮೂಲಕ ಜೆಡಿಎಸ್ ವಲಯಕ್ಕೆ ಅನುಕೂಲ ಮಾಡಿಕೊಡುತ್ತಿದ್ದಾರೆ.
ಅರಸೀಕೆರೆಯಲ್ಲಿ ಕಳೆದ ಮೂರು ಬಾರಿಯ ವಿಧಾನಸಭಾ ಚುನಾವಣೆಯಲ್ಲೂ ಹ್ಯಾಟ್ರಿಕ್ ಗೆಲುವು ಸಾಧಿಸಿರೋದು ಜೆಡಿಎಸ್ ಫೈರ್ ಬ್ರಾಂಡ್ ಶಿವಲಿಂಗೇಗೌಡ. ಅರಸೀಕೆರೆಯ ಜೆಡಿಎಸ್ ಶಾಸಕರ ವಿರುದ್ಧ ತೊಡ್ಡೆತಟ್ಟಲು ಸಂತೋಷ್ ಸದ್ದಿಲ್ಲದೆ ಪ್ರಯತ್ನಿಸಿದ್ದರು. ಆದರೆ ಈಗ ಸ್ವಪಕ್ಷೀಯರ ಪ್ರತಿಭಟನೆ ಬೀದಿರಂಪವಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಜಿಲ್ಲಾ ಮತ್ತು ರಾಜ್ಯ ನಾಯಕರು ಯಾವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.