ಹಾಸನ: ಗುರು ತೋರಿದ ದಾರಿ ತಿಂಗಳ ಮಾಮನ ತೇರು ಕಾರ್ಯಕ್ರಮದ 75ನೇ ಅಮೃತ ಹುಣ್ಣಿಮೆಯ ಮಹೋತ್ಸವ ಹಾಗೂ ರಾಜ್ಯಮಟ್ಟದ ಮಹಿಳಾ ಸಮಾವೇಶದ ಪ್ರಚಾರ ರಥಕ್ಕೆ ಇಂದು ಬೇಲೂರಿನಲ್ಲಿ ಅದ್ದೂರಿ ಚಾಲನೆ ದೊರೆಯಿತು.
ಅ.10 ರಿಂದ 15 ರ ವರೆಗೆ ನಡೆಯುವ ಈ ಕಾರ್ಯಕ್ರಮದ ಪ್ರಚಾರ ರಥಕ್ಕೆ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮತ್ತು ಬೇಲೂರಿನ ಸ್ಥಳೀಯ ಶಾಸಕ ಕೆ ಎಸ್ ಲಿಂಗೇಶ್ ಚಾಲನೆ ನೀಡಿದರು. ಬೇಲೂರು ಪಟ್ಟಣದ ಶ್ರೀ ಚನ್ನಕೇಶವ ದೇವಾಲಯದ ಮುಂಭಾಗದಲ್ಲಿ 75ನೇ ಅಮೃತ ಹುಣ್ಣಿಮೆಯ ಪ್ರಚಾರ ರಥಕ್ಕೆ ಚಾಲನೆ ನೀಡುವ ವೇಳೆ ವಿಶೇಷ ಪೂಜೆಯನ್ನು ಸಲ್ಲಿಸಿ ಸಾವಿರಾರು ಭಕ್ತರ ನಡುವೆ ಚಾಲನೆ ನೀಡಲಾಯ್ತು.
ಈ ಬಾರಿ ಜರುಗಲಿರುವ ಅಮೃತ ಹುಣ್ಣಿಮೆ ಬೆಳದಿಂಗಳೋತ್ಸವದ 6ನೇ ವಾರ್ಷಿಕೋತ್ಸವದಲ್ಲಿ, ಶ್ರೀ ಬಾಲಗಂಗಾಧರ ಸ್ವಾಮೀಜಿ ಅವರ ಸಂಸ್ಮರಣೋತ್ಸವ, ಶ್ರೀ ನಿರ್ಮಲಾನಂದನಾಥ ಸ್ವಾಮಿಯವರ ಗುರುವಂದನಾ ಕಾರ್ಯಕ್ರಮ ಮತ್ತು ರಜತ ತುಲಾಭಾರ ಕಾರ್ಯಕ್ರಮ ಹಾಗೂ ರಾಜ್ಯ ಮಟ್ಟದ ಮಹಿಳಾ ಸಮಾವೇಶ ನಡೆಯಲಿದೆ.
ಅ 15ರ ಬೆಳಿಗ್ಗೆ 9 ಗಂಟೆಗೆ ಮುತ್ತಿನ ಪಲ್ಲಕ್ಕಿ ಉತ್ಸವ ಜರುಗಲಿದ್ದು, ನಂತರ 1008 ಮಂದಿ ಮಹಿಳೆಯರು ಪೂರ್ಣಕುಂಭ ಸ್ವಾಗತವನ್ನು ಮಾಡಲಿದ್ದಾರೆ. ನಾಡಿನ ಹೆಸರಾಂತ ಕಲಾತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಪರಮಪೂಜ್ಯರಿಗೆ ಅಂದು ಗುರುವಂದನೆ ಮತ್ತು ರಜತ ತುಲಾಭಾರ ಹಾಗೂ ಪುಷ್ಪವೃಷ್ಠಿ ಜರುಗಲಿದ್ದು, ಅಂದು ಸಭಾಮಂಟಪದಲ್ಲಿ ಬೇಲೂರಿನ ಪಟ್ಟಣದಲ್ಲಿ ನೆನೆಗುದಿಗೆ ಬಿದ್ದಿರುವ ಮಹಿಳಾ ಒಕ್ಕಲಿಗರ ಸಮುದಾಯ ಭವನಕ್ಕೆ ಕೂಡ ಹೊಸ ರೂಪ ಸಿಗಲಿದೆ ಎಂದ ಸ್ವಾಮಿಜಿ ನುಡಿದರು.
ಇನ್ನು ಈ ವೇಳೆ ಸ್ಥಳೀಯ ಶಾಸಕ ಲಿಂಗೇಶ್ ಸೇರಿದಂತೆ ಒಕ್ಕಲಿಗ ಸಮುದಾಯದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸಸೇರಿದ್ದು, ಪ್ರಚಾರ ರಥ ಚಾಲನೆಗೊಂಡ ಸಂದರ್ಭದಲ್ಲಿ ಆದಿಚುಂಚನಗಿರಿ ಸಂಸ್ಥಾನದ ಶಿಕ್ಷಣ ಸಂಸ್ಥೆಗಳ ಕಾಲೇಜು ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ಆಗಮಿಸಿ ಪಥಸಂಚಲನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.