ಹಾಸನ: ಆಗಸ್ಟ್ ಮೊದಲ ವಾರದಲ್ಲಿ ಸುರಿದ ಭಾರಿ ಮಳೆ-ಗಾಳಿಯಿಂದ ಜಿಲ್ಲೆಯಲ್ಲಿ 350 ಕೋಟಿ ರೂ. ನಷ್ಟ ಸಂಭವಿಸಿದ್ದು, ನಷ್ಟ ಪರಿಹಾರಕ್ಕೆ ಸರ್ಕಾರದ ಮುಂದೆ ಪ್ರಸ್ತಾವನೆ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಜನರ ಸ್ಥಳಾಂತರ, ನಿರಾಶ್ರಿತರ ಕೇಂದ್ರಗಳ ಸ್ಥಾಪನೆ, ಮರಗಳ ತೆರವು ಹಾಗೂ ಇತರೆ ತುರ್ತು ಕಾರ್ಯಗಳಿಗೆ ಬಳಸಿಕೊಳ್ಳಲು ಎಸ್‌ಡಿಆರ್‌ಎಫ್‌ನಿಂದ 5 ಕೋಟಿ ರೂ. ಬಿಡುಗಡೆ ಆಗಿದೆ. ಅದರಲ್ಲಿ 4 ಲಕ್ಷ ರೂ. ಖರ್ಚಾಗಿದೆ. ಅತಿವೃಷ್ಟಿ ಪರಿಹಾರ ವಿತರಣೆಗೆ ಹಣ ಬರಬೇಕಿದೆ ಎಂದರು.
ಸಕಲೇಶಪುರ ತಾಲೂಕಿನಲ್ಲಿ ಶೇ 400ಕ್ಕೂ ಅಧಿಕ ಮಳೆಯಾಗಿದೆ. ಜಿಲ್ಲಾದ್ಯಂತ 348 ಮನೆಗಳಿಗೆ ಹಾನಿಯಾಗಿದ್ದು, 119 ಮನೆ ಸಂಪೂರ್ಣವಾಗಿ ಕುಸಿದಿವೆ. 190 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಪೂರ್ಣ ಕುಸಿದ ಹಾಗೂ ಶೇ75 ಕ್ಕಿಂತ ಹೆಚ್ಚು ಹಾನಿಗೀಡಾಗಿರುವ ಮನೆಗಳಿಗೆ ತಲಾ 5 ಲಕ್ಷ ರೂ. ಹಾಗೂ ಶೇ 25ಕ್ಕಿಂತ ಕಡಿಮೆ ಹಾನಿಯಾದ ಮನೆಗಳಿಗೆ 50 ಸಾವಿರ ರೂ. ಪರಿಹಾರ ದೊರೆಯಲಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಜಿಪಿಎಸ್ ಮೂಲಕ ಫೋಟೋ ಅಪ್‌ಲೋಡ್ ಮಾಡುತ್ತಿದ್ದು, ಮುಂದಿನ ವಾರದಿಂದ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ ಎಂದು ಹೇಳಿದರು.
ಮಳೆ ಪ್ರದೇಶವಾಗಿ 5 ತಾಲೂಕುಗಳ ಸೇರ್ಪಡೆ:
ಜಿಲ್ಲೆಯ ಹಾಸನ, ಅರಕಲಗೂಡು, ಆಲೂರು, ಬೇಲೂರು ಹಾಗೂ ಸಕಲೇಶಪುರ ತಾಲೂಕನ್ನು ಅತಿವೃಷ್ಟಿ ಪೀಡಿತ ತಾಲೂಕುಗಳ ಪಟ್ಟಿಗೆ ಸರ್ಕಾರ ಸೇರಿಸಿದೆ. ಈ ಪ್ರದೇಶಗಳಿಗೆ ಮಾತ್ರ ಪರಿಹಾರ ಲಭ್ಯವಾಗಲಿದೆ. ಜಿಲ್ಲಾದ್ಯಂತ 1 ಸಾವಿರ ಹೆಕ್ಟೇರ್‌ನಲ್ಲಿ ಭತ್ತ, 3460 ಹೆಕ್ಟೇರ್‌ನಲ್ಲಿ ಮೆಕ್ಕೆ ಜೋಳ ಹಾಗೂ 7,924 ಹೆಕ್ಟೇರ್ ಕಾಫಿ ಬೆಳೆ ನಾಶವಾಗಿದೆ. ಮಳೆ ಜತೆಗೆ ಗಾಳಿ ಬೀಸಿದ್ದರಿಂದ ಕಾಫಿ ಹಾಗೂ ಏಲಕ್ಕಿ ಬೆಳೆ ನೆಲಸಮವಾಗಿದೆ ಎಂದು ಮಾಹಿತಿ ನೀಡಿದರು.
756 ಕಿ.ಮೀ. ಗ್ರಾಮೀಣ ರಸ್ತೆ, ಲೋಕೋಪಯೋಗಿ ಇಲಾಖೆಗೆ ಸೇರಿದ 96 ಕಿ.ಮೀ. ರಸ್ತೆ ಹಾಳಾಗಿದೆ. ಜಿಲ್ಲೆಯ ವಿವಿಧೆಡೆ 98 ಅಂಗನವಾಡಿ, 344 ಶಾಲಾ ಕಟ್ಟಡ, 366 ಸರ್ಕಾರಿ ಸಮುದಾಯ ಭವನ ಹಾಗೂ ಇತರ ಕಟ್ಟಡಗಳಿಗೆ ಹಾನಿಯಾಗಿದೆ. 1,141 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ ಎಂದು ತಿಳಿಸಿದರು.
ಕುಡಿಯುವ ನೀರಿನ ಘಟಕಗಳ ಹಾನಿಯು ಪಂಚಾಯಿತಿ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಲೋಕೋಪಯೋಗಿ ಇಲಾಖೆಗೆ ಸೇರಿದ 65 ಕಿ.ಮಿ. ಹೆದ್ದಾರೆ ರಸ್ತೆ, 96 ಕಿ.ಮಿ. ಪ್ರಧಾನ ರಸ್ತೆ ಹಾನಿಯಾಗಿದ್ದು, ಇದಕ್ಕೆ ಹೆಚ್ಚಿನ ವಿಶೇಷ ಹಣ ಬೇಕಾಗುತ್ತದೆ ಎಂದು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು.