ಗದಗ: ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಅವಾಂತರಗಳನ್ನ ಸೃಷ್ಟಿಸಿದೆ. ಅದರಲ್ಲಿ ರಾತ್ರಿ ಮನೆಯಲ್ಲಿ ಮಲಗಿದ್ದ ವೃದ್ಧ ದಂಪತಿ ಮೇಲೆ ಗೋಡೆ ಕುಸಿದರೂ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಕಣವಿ ಗ್ರಾಮದಲ್ಲಿ ಘಟನೆ ನಡೆದಿದೆ.
ಗ್ರಾಮದ ಗೂಳಪ್ಪ ಹಾಗೂ ರೇಣವ್ವ ಈ ವೃದ್ಧ ದಂಪತಿ ರಾತ್ರಿ ಮನೆಯಲ್ಲಿ ಮಲಗಿದ್ದಾಗ 3-4 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಪಕ್ಕದ ಮನೆಯ ಗೋಡೆ ಕುಸಿದಿದೆ. ಇಬ್ಬರು ದಂಪತಿಯ ಮೇಲೆ ಗೋಡೆ ಕುಸಿದು ಮಣ್ಣಿನಲ್ಲಿ ಸಿಲುಕಿ ಸುಮಾರು ಗಂಟೆ ನರಳಾಡಿದ್ದಾರೆ. ಬಳಿಕ ಪಕ್ಕದ ಮನೆಯವರು ವೃದ್ಧ ದಂಪತಿಯ ನರಳಾಟ ನೋಡಿ ಮಣ್ಣಿನಡಿ ಸಿಲುಕಿದ್ದ ದಂಪತಿಯನ್ನ ರಕ್ಷಣೆ ಮಾಡಿದ್ದಾರೆ. ಬಳಿಕ ಆ್ಯಂಬುಲೆನ್ಸ್ ಮೂಲಕ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೃದ್ಧೆ ತಲೆಗೆ, ಕಣ್ಣಿಗೆ ಗಾಯವಾಗಿದೆ. ಆದರೆ ಪತಿ ಗೂಳಪ್ಪನಿಗೆ ಮಾತ್ರ ಯಾವುದೇ ಗಾಯವಾಗಿಲ್ಲ. ಕಾರಣ ಆತನ ಮೇಲೆ ಗೋಡೆಯ ಪಕ್ಕದಲ್ಲಿದ್ದ ಜೋಳದ ಚೀಲಗಳು ಬಿದ್ದಿದ್ದರಿಂದ ಗೋಡೆಯ ಕಲ್ಲುಗಳಿಂದ ವೃದ್ಧ ಬಚಾವ್ ಆಗಿದ್ದಾನೆ.
ಈ ವೃದ್ಧ ದಂಪತಿಗೆ ಒಂದು ಆಶ್ರಯ ಮನೆ ಕಟ್ಟಿಸಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.