ಗದಗ: ವಿಜಯಪುರದ ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯದ ಬಗ್ಗೆ ನಾನು ನಿತ್ಯ ಮಾಹಿತಿ ಪಡೆಯುತ್ತಿದ್ದೇನೆ. ಹೆಚ್ಚಿನ ಚಿಕಿತ್ಸೆಗೆ ಶ್ರೀಗಳು ಒಪ್ಪುತ್ತಿಲ್ಲ. ಒಪ್ಪಿದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೇತೃತ್ವದಲ್ಲಿ ಅಗತ್ಯ ಚಿಕಿತ್ಸೆ ನೀಡಲು ಸಿದ್ಧರಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರೊಬ್ಬರು ವಿಭೂತಿ ಪುರುಷರು. ಪುಣ್ಯದ ಜೀವ ಇನ್ನೂ ಕೆಲವು ವರ್ಷಗಳ ಕಾಲ ನಮಗೆ ಮಾರ್ಗದರ್ಶನ ನೀಡಬೇಕು ಎಂಬ ಅಪೇಕ್ಷೆ ಇದೆ, ಅವರಿಗೆ ನಾವು ಹೆಚ್ಚಿನ ಚಿಕಿತ್ಸೆ ಕೊಡಿಸ್ತೀವಿ ಅಂದಾಗ ಕೈ ಮುಗಿದು ನಮಸ್ಕಾರ ಮಾಡಿ ಬೇಡ ಅಂತ ಹೇಳುತ್ತಿದ್ದಾರೆ. ಇತ್ತೀಚೆಗೆ ಅವರನ್ನು ಭೇಟಿಯಾದಾಗ ಇದೇ ಮಾತನ್ನು ಹೇಳಿದ್ದರು. ಕೈ ಮುಗಿಯುವ ಮೂಲಕ ನಿಮ್ಮ ಕಳಕಳಿಗೆ ಧನ್ಯವಾದ ಅಂತ ತಿಳಿಸಿದ್ದಾರೆ. ಸದ್ಯ ಚಿಕಿತ್ಸೆಯನ್ನು ಸ್ಥಳೀಯವಾಗಿ ಪಡೆಯುತ್ತಿದ್ದಾರೆ ಎಂದು ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ನಂತರ ಮಾತನಾಡಿದ ಅವರು ನಂದಿನಿ ಮತ್ತು ಅಮೂಲ್ ವಿಲೀನ ಮಾಡಿದರೆ ಕಿಡಿ ಹೊತ್ತುತ್ತೆ ಎಂದು ಹೇಳಿಕೆ ನೀಡಿರುವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನಾಯಕರಿಗೆ ಬೆಂಕಿ ಹಚ್ಚುವುದೊಂದೇ ಕೆಲಸವಾಗಿದೆ, ಅವರು ಬೆಂಕಿ ಹಚ್ಚಿಯೇ ಇಷ್ಟುದಿನ ಆಡಳಿತ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದು ಜನಕ್ಕೆ ಅರ್ಥ ಆಗಿದೆ. ಯಾರು ಬೆಂಕಿ ಹಚ್ತಾರೆ, ಯಾರು ದೇಶಕ್ಕೆ ಒಳ್ಳೆಯ ಆಡಳಿತ ಕೊಡ್ತಾರೆ ಅಂತ ಜನರು ಅರ್ಥ ಮಾಡಿಕೊಂಡಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವ ಇಲ್ಲದ ಪಾರ್ಟಿ. ಗುಜರಾತ್, ಉತ್ತರ ಪ್ರದೇಶ, ಉತ್ತರಾಖಂಡ್ ಸೇರಿದಂತೆ ಹಲವೆಡೆ ಕಾಂಗ್ರೆಸ್ ಸ್ಥಿತಿ ಏನಾಗಿದೆ ಅಂತ ಅವರು ಅರ್ಥ ಮಾಡ್ಕೊಂಡು ಮಾತನಾಡಬೇಕು ಎಂದರು.
ವಿಲೀನದ ಪ್ರಶ್ನೆಯೇ ಇಲ್ಲ: ನಂದಿನಿ ಮತ್ತು ಅಮೂಲ್ ವಿಲೀನ ಮಾಡುವ ಪ್ರಶ್ನೆಯೇ ಇಲ್ಲ. ಪರಸ್ಪರ ಸಹಕಾರದಿಂದ ಮಾರ್ಕೆಟಿಂಗ್ ಅಸಿಸ್ಟನ್ಸ್ ಉಪಯೋಗ ಮಾಡ್ಕೊಂಡು ಟೆಕ್ನಿಕಲ್ ಎಕ್ಪರ್ಟ್ ಎಕ್ಷಚೇಂಜ್ ಮಾಡ್ಕೊಂಡರೆ ಇನ್ನೂ ಹೆಚ್ಚು ಮಾರ್ಕೆಟ್ ಸಿಗ್ತದೆ. ಯಾಕೆಂದರೆ ದೇಶದಲ್ಲಿ ಎಲ್ಲಾ ಭಾಗದಲ್ಲಿ ಅಮೂಲ್ ಇದೆ. ನಂದಿನಿ ಮಾತ್ರ ಸ್ವತಂತ್ರವಾಗಿ ಉತ್ಪಾದನೆ ಮಾಡ್ತಿದೆ. ಮಾರ್ಕೆಟಿಂಗ್ ಸ್ಟ್ರ್ಯಾಟರ್ಜಿ ಮತ್ತು ಟೆಕ್ನಿಕಲ್ ಎಕ್ಸಚೇಂಜ್ ಮಾಡ್ಕೊಳ್ಳಿ ಅಂತ ಹೇಳಿದ್ದಾರೆ. ಇಗಾಗಿ ನಂದಿನಿ ವಿಲೀನ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಈ ಅರ್ಥದಲ್ಲಿ ಅಮಿತ್ ಶಾ ಹೇಳಿದ್ದಾರೆ ಎಂದು ಕೇಂದ್ರ ಸಚಿವರು ಸ್ಪಷ್ಟನೆ ನೀಡಿದರು.
ಸರ್ಕಾರ- ಆರ್ಬಿಐಗೆ ಆ ಅಧಿಕಾರ ಇದೆ; ಇನ್ನು ನೋಟ್ ಬ್ಯಾನ್ ಕುರಿತು ಸುಪ್ರೀಂ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರಕ್ಕೆ, ಆರ್ಬಿಐಗೆ ಅಧಿಕಾರ ಇದ್ದೇ ಇದೆ. ಸರ್ಕಾರ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳವ ಅವಕಾಶ ಇದೆ. ಈ ಅವಕಾಶ ಬಳಸಿಕೊಂಡು ನೋಟ್ ಬ್ಯಾನ್ ಮಾಡಲಾಗಿತ್ತು. ಕಾಂಗ್ರೆಸ್ನವರು ಕಪ್ಪು ಹಣ ಇಟ್ಟಿದ್ದರು. ಹಾಗಾಗಿ ಇದು ಸಮಸ್ಯೆಯಾಗಿತ್ತು. ಅದಕ್ಕಾಗಿ ಅವರು ಕೋರ್ಟ್ಗೆ ಹೋಗಿದ್ದರು ಎಂದರು.
ಮಹದಾಯಿ ವಿಷಯವಾಗಿ ಕಾಂಗ್ರೆಸ್ ಹುಬ್ಬಳ್ಳಿಯಲ್ಲಿ ಹೋರಾಟ ಮಾಡುತ್ತಿದೆ. ಮಹಾತ್ಮಾ ಗಾಂಧಿ ಹೆಸರು ಹೇಳಿಕೊಂಡು ರಾಜ್ಯ, ದೇಶದಲ್ಲಿ ಐವತ್ತು ವರ್ಷ ಆಡಳಿತ ಮಾಡಿದ್ದೀರಿ. ಕಾಂಗ್ರೆಸ್ ಗೆ ದೇಶದ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ನಾವು 2006 ರಲ್ಲೇ ಮಹದಾಯಿ ವಿಷಯವಾಗಿ ಲೋಕಸಭೆಯಲ್ಲಿ ಗಮನ ಸೆಳೆದಿದ್ದೆವು. ಮಹದಾಯಿ ಕುಡಿಯುವ ನೀರಿನ ಪಾಲನ್ನು ಕೊಡಿ, ಉಳಿದಿದ್ದನ್ನು ನ್ಯಾಯಮಂಡಳಿಗೆ ಒಪ್ಪಿಸಿ ಎಂದು ಹೇಳಿದ್ದೆವು ಎಂದು ಹೇಳಿದರು.
ಸೋನಿಯಾ ಗಾಂಧಿಯವರು ಗೋವಾಕ್ಕೆ ಹೋಗಿ ಒಂದು ಹನಿ ನೀರು ಕೊಡಲ್ಲ ಅಂತಾ ಹೇಳಿ ಬರುತ್ತಾರೆ. 2006 ನಾವು ಯೋಜನಾ ವರದಿ ತಯಾರು ಮಾಡಿ ಮುಂದುವರಿದಾಗ ಗೋವಾ ಕಾಂಗ್ರೆಸ್ ಕೋರ್ಟ್ಗೆ ಹೋಗಿತ್ತು. ನಮ್ಮ ಪಾಲು ನಮಗೆ ಸಿಗುತ್ತೆ ಅಂತಾ ಕಾಲುವೆ ಕಟ್ಟಿದ್ರಿ, ಅಡ್ಡಲಾಗಿ ಗೋಡೆ ಕಟ್ಟಿದ್ರಿ. ಸೋನಿಯಾ ಗಾಂಧಿ ಅವರ ಹೇಳಿಕೆಗೋ, ಗೋಡೆ ಕಟ್ಟಿದ್ದಕ್ಕೋ. ಯಾವುದಕ್ಕೂ ಹೋರಾಟ ಮಾಡುತ್ತಿದ್ದೀರಿ ಅನ್ನೋದನ್ನು ಸ್ಪಷ್ಟ ಪಡಿಸಿ ಎಂದರು.
ಎರಡು ತಿಂಗಳಲ್ಲಿ ಈ ಯೋಜನೆ ಶಂಕುಸ್ಥಾಪನೆ ಆಗಲಿದೆ ಅಂತಾ ಮುಖ್ಯಮಂತ್ರಿಗಳು ಹೇಳಿದ್ದಾರೆ. ಡಿಪಿಆರ್ ಅನುಮೋದನೆ ಮಾಡಿದ ಪ್ರತಿಯಲ್ಲಿ ದಿನಾಂಕ ಇಲ್ಲ ಅಂತಾರೆ. ಎಚ್ ಕೆ ಪಾಟೀಲರು ನೀರಾವರಿ ಸಚಿವರಾಗಿದ್ದರು. ಪುಸ್ತಕ ಬರೆಸುವುದನ್ನ ಬಿಟ್ಟು ಏನು ಮಾಡಿಲ್ಲ. ಮೋದಿ ಸರ್ಕಾರ ಸಮಸ್ಯೆ ಬಗೆಹರಿಸ್ತಿದೆ. ಕೆಲವೆಡೆ ನದಿಗಳ ಜೋಡಣೆಯೂ ಆಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಇದನ್ನೂ ಓದಿ:ಸಿದ್ದೇಶ್ವರ ಶ್ರೀಗಳ ಆರೋಗ್ಯ ಚೇತರಿಕೆಗೆ ಹುಕ್ಕೇರಿ ಹಿರೇಮಠದಲ್ಲಿ ಜಯಮೃತ್ಯುಂಜಯ ಹೋಮ