ಗದಗ: ಉತ್ತರ ಕರ್ನಾಟಕದ ಅತಿದೊಡ್ಡ ಪ್ರಾಣಿ ಸಂಗ್ರಹಾಲಯ ಎಂಬ ಖ್ಯಾತಿ ಪಡೆದ ಗದಗನ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದಲ್ಲಿ ಇನ್ಮುಂದೆ ಸಿಂಹ ಘರ್ಜನೆ ಕೇಳಿಸಲಿದ್ದು, ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಜೋಡಿ ಸಿಂಹಗಳು ಆಗಮಿಸಲಿವೆ.
ಈ ಕುರಿತು ಬನ್ನೇರುಘಟ್ಟ ಝೂ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ವಿಶ್ವ ಸಿಂಹ ಸಂರಕ್ಷಣಾ ದಿನಾಚರಣೆಯ ಪ್ರಯುಕ್ತ ಶಿವಮೊಗ್ಗ ಪ್ರಾಣಿ ಸಂಗ್ರಹಾಲಯಕ್ಕೆ ಧರ್ಮ ಮತ್ತು ಅರ್ಜುನ ಎಂಬ ಗಂಡು ಸಿಂಹಗಳು ಮತ್ತು ಗದಗ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ ನಕುಲ ಮತ್ತು ನಿರೂಪಮ ಎಂಬ ಗಂಡು ಮತ್ತು ಹೆಣ್ಣು ಸಿಂಹಗಳನ್ನು ಕೊಡುಗೆಯಾಗಿ ನೀಡಲಾಗುವುದು. ಮುಖ್ಯ ಪ್ರಾಣಿ ಸಂಗ್ರಹಾಲಯದ ಆಡಳಿತಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯದಲ್ಲೇ ಅನುಮತಿ ದೊರೆಯಲಿದೆ ಎಂದು ಬನ್ನೇರುಘಟ್ಟ ಝೂ ಎಂಬ ಅಧಿಕೃತ ಪೇಜ್ ಟ್ವೀಟ್ ಮಾಡಿದೆ.
ಸಿಂಹಗಳ ಆಗಮನದಿಂದ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ ಮತ್ತಷ್ಟು ಆಕರ್ಷಣೀಯವಾಗಲಿದ್ದು, ಪ್ರಾಣಿ ಪ್ರಿಯರು, ಪ್ರವಾಸಿಗರು ಕಾತುರದಲ್ಲಿದ್ದಾರೆ.
ರಾಜ್ಯದ ಏಕೈಕ ಸಣ್ಣ ಮೃಗಾಲಯ ಎಂಬ ಹೆಗ್ಗಳಿಕೆ ಹೊಂದಿರುವ ಬಿಂಕದಕಟ್ಟಿ ಮೃಗಾಲಯವೂ 40 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಇಲ್ಲಿ ಜಿಂಕೆ, ಸಾರಂಗ, ಕತ್ತೆ ಕಿರುಬ, ಕೃಷ್ಣಮೃಗ, ಕರಡಿ, ಮುಳ್ಳುಹಂದಿ, ಕಾಡುಕುರಿ, ಚಿರತೆ, ಉಡ, ಹೆಬ್ಬಾವು, ಮೊಸಳೆ, ನವಿಲು ಸೇರಿದಂತೆ ಸುಮಾರು 37ಕ್ಕೂ ಹೆಚ್ಚು ಪ್ರಭೇದದ 400ಕ್ಕೂ ಹೆಚ್ಚು ಪ್ರಾಣಿ, ಪಕ್ಷಿಗಳಿವೆ. ಚಿಕ್ಕ ಮಕ್ಕಳ ಉದ್ಯಾನವೂ ಇಲ್ಲಿದೆ.
ಎರಡೂವರೆ ವರ್ಷದ ಹಿಂದೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಿಂದ ಅನಸೂಯಾ ಹಾಗೂ ಲಕ್ಷ್ಮಣ್ ಹೆಸರಿನ ಎರಡು ಹುಲಿಗಳನ್ನು ಇಲ್ಲಿಗೆ ತಂದಿರುವುದರಿಂದ ಪ್ರವಾಸಿಗರ ಸಂಖ್ಯೆಯೂ ಹೆಚ್ಚಳವಾಗಿತ್ತು. ಈಗ ಸಿಂಹಗಳ ಆಗಮನದಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗಲಿದೆ ಅನ್ನೋದು ಅಧಿಕಾರಿಗಳ ಅಭಿಪ್ರಾಯವಾಗಿದೆ.