ಗದಗ: ಕೊರೊನಾ ಹಿನ್ನೆಲೆ ಲಾಕ್ಡೌನ್ನಿಂದ ಗೋವಾದಲ್ಲಿ ಲಾಕ್ ಆಗಿದ್ದ ಗದಗದ ಕೂಲಿ ಕಾರ್ಮಿಕರು ಈಗ ಊರಿಗೆ ಬರೋದಕ್ಕೆ ಬಸ್ ಸಿಕ್ಕರೂ ಗೋಳು ಇನ್ನೂ ಮುಗಿದಿಲ್ಲ.
ಯಾಕೆಂದರೆ ಕೆಎಸ್ಆರ್ಟಿಸಿಯವರು ದುಬಾರಿ ದರ ನಿಗದಿಪಡಿಸಿ ಮತ್ತಷ್ಟು ಸಂಕಷ್ಟ ತಂದೊಡ್ಡಿದ್ದಾರೆ ಎಂದು ಗೋವಾದಲ್ಲಿ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.
ಈ ಮೂಲಕ ತವರು ಜಿಲ್ಲೆಗೆ ಮರಳಲು ಮುಂದಾಗಿರುವ ಗೋವಾ ಕನ್ನಡಿಗರಿಗೆ ಕರ್ನಾಟಕ ಸರ್ಕಾರವೇ ಶಾಕ್ ಕೊಟ್ಟಿದೆ. ಗೋವಾ ಗಡಿಯಿಂದ ಗದಗ ನಗರಕ್ಕೆ ಒಬ್ಬರಿಗೆ ಬರೋಬ್ಬರಿ 3 ಸಾವಿರ ರೂ. ದರ ನಿಗದಿ ಮಾಡಿದ್ದಾರೆ ಎಂದು ಕಾರ್ಮಿಕರು ಹೇಳುತ್ತಿದ್ದಾರೆ. ಹಾಗಾಗಿ ದರ ಹೆಚ್ಚಳ ವಿರೋಧಿಸಿ ಅಧಿಕಾರಿಗಳ ವಿರುದ್ಧ ಕಾರ್ಮಿಕರು ಬಸ್ ತಡೆದು ಬಸ್ ಮುಂದೆ ನಿಂತು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯ ವಿವಿಧ ತಾಂಡಾಗಳ ಜನರು ಗೋವಾಕ್ಕೆ ದುಡಿಯಲು ಗುಳೆ ಹೋಗಿದ್ದರು. ಲಾಕ್ಡೌನ್ನಿಂದ ದುಡಿಮೆ ಇಲ್ಲದೆ ಜೀವನ ಕಷ್ಟವಾಗಿತ್ತು. ಇತ್ತ ದುಡಿಮೆ ಇಲ್ಲದೆ, ಜೊತೆಗೆ ಊರಿಗೆ ಹೋಗಲು ಬಸ್ ಇಲ್ಲದೆ ಬರೋಬ್ಬರಿ 2 ತಿಂಗಳ ಕಾಲ ಪರದಾಡಿದ್ದಾರೆ. ಆದ್ರೆ ಇಂತಹ ಕಷ್ಟದ ಸಮಯದಲ್ಲಿ ಸರ್ಕಾರ 3 ಸಾವಿರ ರೂ. ದರ ನಿಗದಿ ಮಾಡಿದರೆ ಹೇಗೆ ಕೊಡಬೇಕು ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು ಸಾವಿರಕ್ಕೂ ಹೆಚ್ಚು ಜನರು ಗೋವಾ ಮತ್ತು ಕರ್ನಾಟಕದ ಗಡಿಯ ಕಾರವಾರದ ಬಳಿ ನಿಂತಿದ್ದಾರೆ. ಸೂಕ್ತ ದರದಲ್ಲಿ ನಮ್ಮ ನಮ್ಮ ಜಿಲ್ಲೆಗಳಿಗೆ ಕರೆದ್ಯೊಯುವಂತ ಒತ್ತಾಯ ಮಾಡುತ್ತಿದ್ದಾರೆ.