ಗದಗ : ಬೈಕ್ಗೆ ಗೂಡ್ಸ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಜಾಲವಾಡಗಿ ಕ್ರಾಸ್ ಬಳಿಯ ಕಣವಿ ದುರ್ಗಮ್ಮ ದೇವಸ್ಥಾನದ ಹತ್ತಿರ ನಡೆದಿದೆ.
ಮಹ್ಮದ್ ರಫಿ (24) ಬಿಬಿ ಹಾಝಿರಾ ಲಂಗೋಟಿ (22) ಹಾಗೂ ಒಂದೂವರೆ ವರ್ಷದ ಮಗು ಮಹ್ಮದ್ ಸಾಜಿಬ್ ಮೃತ ದುರ್ದೈವಿಗಳು. ತಂಗಿಯನ್ನು ಗಂಡನ ಮನೆಗೆ ಬಿಡಲು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮೃತರು ಶಿರಹಟ್ಟಿ ತಾಲೂಕಿನ ಕಣಕವಾಡ ನಿವಾಸಿಗಳಾಗಿದ್ದು, ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ.
ಬೈಕ್ ಸವಾರರು ಶಿರಹಟ್ಟಿಯಿಂದ ಮುಂಡರಗಿ ಪಟ್ಟಣದತ್ತ ತೆರಳುತ್ತಿದ್ದಾಗ ಎದುರಿಗೆ ಅತೀ ವೇಗವಾಗಿ ಬಂದ ಗೂಡ್ಸ್ ಲಾರಿ ಇವರ ಬೈಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿ ಚಾಲಕನ ಅಜಾಗರೂಕತೆಯಿಂದ ಈ ಡಿಕ್ಕಿ ಸಂಭವಿಸಿದೆ ಎನ್ನಲಾಗುತ್ತಿದೆ.
ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.