ಗದಗ: ಬೈ ಎಲಕ್ಷನ್ಗೆ ನಾವು ಎಲ್ಲಾ ಬಗೆಯ ಸಿದ್ಧತೆ ಮಾಡಿಕೊಂಡಿದ್ದೇವೆ. ಇಷ್ಟೇ ಸ್ಥಾನ ಗೆಲ್ತೀವಿ ಅಂತ ಶಾಸ್ತ್ರ ಹೇಳೋಕೆ ಸಾಧ್ಯವಿಲ್ಲ. ಒಟ್ಟಾರೆ ಮೆಜಾರಿಟಿ ಗೆದ್ದೇ ಗೆಲ್ತಿವಿ. ನಾವು ಮೆಜಾರಿಟಿ ಪಡೆದ ಮೇಲೆ ಸರ್ಕಾರ ಅದಾಗಿಯೇ ಬೀಳುತ್ತೆ ಜೆಡಿಎಸ್ ಜೊತೆಗಿ ಮೈತ್ರಿ ಮುಗಿದು ಹೋದ ಅಧ್ಯಾಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಗದಗದಲ್ಲಿ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ಗೆ ಆಗಮಿಸಿದ ಅವರು, ಉದ್ಘಾಟನೆ ಬಳಿಕ ಮಾತನಾಡಿ ಬಿಜೆಪಿ ಯವರು ಈವರೆಗೂ ಬಿದ್ದ ಮನೆಗಳಿಗಾಗಲಿ ಹಾಳಾದ ಜಮೀನಿಗಾಗಲೀ ಪರಿಹಾರ ನೀಡದೆ ಉಪ ಚುನಾವಣೆ ಮೀಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಬಿಜೆಪಿಯವರಿಗೆ ಬೈ ಎಲೆಕ್ಷನ್ ಮೀಟಿಂಗ್ ಮಾಡೋದಕ್ಕೆ ಸಮಯವಿದೆ. ಆದರೆ ಸಂತ್ರಸ್ತರ ಸಮಸ್ಯೆ ಪರಿಹರಿಸೋದಕ್ಕೆ ಸಮಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿಸಿ ಪಾಟೀಲ್ ಖಜಾನೆ ಖಾಲಿ ಆಗಿದೆ ಎಂದು ಹೇಳಿಕೆ ನೀಡಿದ್ದು, ಅದು ಅವರ ಅಜ್ಞಾನವನ್ನು ತೋರಿಸುತ್ತಿದೆ. ಇದು ಅವರಿಗೆ ಇಚ್ಛಾಶಕ್ತಿಯ ಕೊರತೆಯಿದೆ ಅನ್ನೋದನ್ನು ತೋರಿಸುತ್ತೆ ಎಂದು ಕಿಡಿಕಾರಿದರು.
ಇನ್ನು ಡಿಕೆ ಶಿವಕುಮಾರ್ ಅವರಿಗೆ ಕರ್ನಾಟಕದಲ್ಲಿ ಭವ್ಯ ಸ್ವಾಗತ ಕೋರಿರುವ ವಿಚಾರಕ್ಕೆ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಅದು ಅವರ ಅಭಿಮಾನಿಗಳಿಗೆ ಬಿಟ್ಟ ವಿಚಾರ. ಅವರು ಸ್ವಯಂ ಪ್ರೇರಿತವಾಗಿ ಸ್ವಾಗತ ಮಾಡ್ತಿದ್ದಾರೆ. ಇದೇ ಸಂದರ್ಭದಲ್ಲಿ ಹಕ್ಕುಚ್ಯುತಿ ಮಂಡನೆ ಕುರಿತಂತೆ ಮಾತನಾಡಿ, ನಾನು 1983 ರಲ್ಲೇ ವಿಧಾನಸಭೆಗೆ ಬಂದವನು. ಹೀಗಾಗಿ ನನಗೆ ಹೇಗೆ ಸ್ಪೀಕರ್ ಗೆ ಗೌರವ ನೀಡಬೇಕೆಂಬುದು ಗೊತ್ತಿದ್ದು, ಅವರ ಮೇಲೆ ಅಪಾರ ಗೌರವವಿದೆ ಎಂದರು.
ಅಲ್ಲದೇ ಸ್ಪೀಕರ್ಗೆ ಗೌರವ ಕೊಡಬೇಕೆಂಬುದನ್ನ ಯಡಿಯೂರಪ್ಪರಿಂದ ಕಲಿಯುವ ಅವಶ್ಯಕತೆ ನನಗಿಲ್ಲ. ಹೀಗಾಗಿ ಹಕ್ಕುಚ್ಯುತಿ ಮಂಡನೆ ಮಾಡುವ ಪ್ರಮೇಯವೇ ಬರೋಲ್ಲ ಎಂದು ತಮ್ಮ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡೋದನ್ನು ಸಾರಾಸಗಟವಾಗಿ ತಳ್ಳಿ ಹಾಕಿದರು.