ಗದಗ: ರಾಜಕೀಯಕ್ಕೆ ಸೇರಬೇಕು ಈ ಮೂಲಕ ಜನಸೇವೆ ಮಾಡಬೇಕೆಂಬ ಹಂಬಲದಿಂದ ಸಿವಿಲ್ ನ್ಯಾಯಾಧೀಶರಾಗಿದ್ದ ಸುಭಾಶ್ಚಂದ್ರ ರಾಠೋಡ್ ಎನ್ನುವವರು ತಮ್ಮ ಉನ್ನತ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ತಯಾರಿ ಸಹ ನಡೆಸಿದ್ದಾರೆ. ಗದಗ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾಗಿದ್ದ ರಾಠೋಡ್, ಜನಸೇವೆ ಮಾಡುವ ಆಸೆಯಿಂದ ಕಲಬುರಗಿ ಜಿಲ್ಲೆಯ ಚಿತ್ತಾಪುರ ಮತಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಬಯಸಿದ್ದಾರೆ. ಇದಕ್ಕಾಗಿ ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಲಂಬಾಣಿ ಜನಾಂಗದಲ್ಲಿ ಪಿಎಚ್‌ಡಿ ಪಡೆದ ಮೊದಲಿಗ: ಮೂಲತಃ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಸಂಕನಾಳ ಗ್ರಾಮದವರಾದ ಸುಭಾಶ್ಚಂದ್ರ ರಾಠೋಡ್, ಕಾರ್ಮಿಕರ ಕಾನೂನು ವಿಷಯದಲ್ಲಿ ಪಿಎಚ್‌ಡಿ ಕೂಡ ಪಡೆದಿದ್ದಾರೆ. ಈ ಮೂಲಕ ಲಂಬಾಣಿ ಜನಾಂಗದಲ್ಲಿ ಪಿಎಚ್‌ಡಿ ಪಡೆದ ಮೊದಲಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2010 ರಲ್ಲಿ ವಕೀಲ ವೃತ್ತಿ ಆರಂಭಿಸಿದ ಸುಭಾಶ್ಚಂದ್ರ, ವೃತ್ತಿಯ ಜೊತೆಗೆ ಅತಿಥಿ ಉಪನ್ಯಾಸಕರಾಗಿ ಕೆಲ ಕಾಲ ಕಾರ್ಯನಿರ್ವಹಿಸಿದ್ದರು. 2013 ರಿಂದ ವಕೀಲ ವೃತ್ತಿಯೊಂದಿಗೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, ನ್ಯಾಯಮೂರ್ತಿ ಸಂತೋಷ ಹೆಗ್ಡೆ ಮತ್ತು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಸಲಹೆ ಹಾಗೂ ಪ್ರೇರಣೆಯಿಂದ ಸಾಮಾಜಿಕ ಸೇವೆಯಲ್ಲಿ ತೋಡಗಿಕೊಂಡಿದ್ದರು.
2016 ರಲ್ಲಿ ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡ ಸುಭಾಶ್ಚಂದ್ರ, 2016 ರಿಂದ 2019 ರ ವರೆಗೆ ಕಲಬುರಗಿಯಲ್ಲಿ, 2019 ರಿಂದ 2022 ರವರೆಗೆ ಚಿತ್ತಾಪುರದಲ್ಲಿ ನಂತರ 2022 ರಿಂದ 2023 ರ ವರೆಗೆ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಆಗಿ ಕಾರ್ಯನಿರ್ವಹಿಸಿದ್ದರು. ಇತ್ತೀಚಿಗೆ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿರುವ ಅವರು ರಾಜಕೀಯ ಕಣಕ್ಕೆ ಧುಮುಕುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಸದ್ಯ ಸಮಾಜದಲ್ಲಿ ಭ್ರಷ್ಟಾಚಾರ, ಅನ್ಯಾಯ, ಶೋಷಣೆ ಮಿತಿಮೀರಿವೆ. ಈ ಕೃತ್ಯಗಳಿಂದ ಬೇಸತ್ತು ನಾನು ನ್ಯಾಯಾಧೀಶ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ವಕೀಲ ವೃತ್ತಿಯ ಜೊತೆಗೆ ಸದೃಢ ಮತ್ತು ಸಮರ್ಥ ಸಮಾಜ ನಿರ್ಮಾಣಕ್ಕಾಗಿ ಪಣ ತೊಟ್ಟಿರುವ ಇವರಿಗೆ ಚಿತ್ತಾಪುರ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ.
ಇದನ್ನೂ ಓದಿ:ಒಕ್ಕಲಿಗ ಸಮುದಾಯಕ್ಕೆ 3 ಎಕರೆ 10 ಗುಂಟೆ ಜಮೀನು ದಾನ ಮಾಡಿದ ಶಾಸಕ ಶರತ್ ಬಚ್ಚೇಗೌಡ