ಗದಗ : ಕೊರೊನಾ ನಿಯಂತ್ರಣಕ್ಕೆ ಅರ್ಧ ದಿನದ ಲಾಕ್ಡೌನ್ ವಿಧಿಸಲಾಗಿದೆ. ಒಂದು ವೇಳೆ ನಿಷೇಧಾಜ್ಞೆ ಉಲ್ಲಂಘನೆ ಮಾಡಿದ್ರೆ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್ ಹೇಳಿದ್ದಾರೆ.
ಜಿಲ್ಲೆಯಾದ್ಯಂತ ಜುಲೈ 27ರವರೆಗೆ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದರ ಉದ್ದೇಶ ಸಫಲವಾಗಿ ಜಿಲ್ಲೆಯಲ್ಲಿ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರಲು ಜನರು ಸಹಕಾರ ನೀಡದಿದ್ದಲ್ಲಿ ಪರಿಸ್ಥಿತಿ ಬಹಳ ಗಂಭೀರವಾಗಲಿದೆ ಎಂದಿದ್ದಾರೆ.
ಒಂದು ಹಂತದವರೆಗೆ ಜಿಲ್ಲೆಯಲ್ಲಿ ನಿಯಂತ್ರಣದಲ್ಲಿದ್ದ ಸೋಂಕು ಹಲವರು ಸೋಂಕು ತಡೆ ವಿಧಾನಗಳನ್ನು ಅನುಸರಿಸುವಲ್ಲಿ ನಿರ್ಲಕ್ಷ್ಯ ತೋರಿದ್ದು, ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ. ಇಂದು ನಾವೆಲ್ಲ ಆರೋಗ್ಯ ತುರ್ತು ಸ್ಥಿತಿಯಲ್ಲಿದ್ದೇವೆ. ಸಾಮಾನ್ಯ ದಿನಗಳಂತೆ ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರುವುದು, ಗುಂಪುಗೂಡಿ ಓಡಾಡುವುದು, ಮುಖಕ್ಕೆ ಮಾಸ್ಕ್ ಧರಿಸದೆ ಇರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರುವುದನ್ನು ತಪ್ಪಿಸಬೇಕಿದೆ.
ಹೀಗಾಗಿ ಪ್ರತಿಯೊಬ್ಬರು ಲಾಕ್ಡೌನ್ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿ ಸಹಕರಿಸಿ ಎಂದು ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.