ಗದಗ : ಮೆಕ್ಕೆಜೋಳ ತುಂಬಿಕೊಂಡು ಡಂಬಳ ಗ್ರಾಮಕ್ಕೆ ಹೊರಟಿದ್ದ ಟ್ರ್ಯಾಕ್ಟರ್ಗೆ (Gadag Accident) ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಸಮೇತ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಮುಂಡರಗಿ-ಮೇವುಂಡಿ ಮಧ್ಯ ಈ ದುರ್ಘಟನೆ ನಡೆದಿದೆ.
ಶಿವಾನಂದಯ್ಯ ಶಿವಲಿಂಗಯ್ಯ ಹಿರೇಮಠ, ತಾಯಿ ಅನಸೂಯಾ ಶಿವಲಿಂಗಯ್ಯ ಹಿರೇಮಠ (65), ಶಿವಾನಂದಯ್ಯ ಅವರ ಪುತ್ರಿ ನಮಸ್ವಿ (6) ಮೃತ ದುರ್ದೈವಿಗಳಾಗಿದ್ದಾರೆ. ಶಿವಾನಂದಯ್ಯ ಅವರ ಪತ್ನಿ ಗಿರಿಜಾ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿಯ ಅಮರಗೋಳ ಬಳಿಯ ಕೆಎಚ್ಬಿ ಕಾಲೋನಿಯ ನಿವಾಸಿಗಳು ಎನ್ನಲಾಗಿದೆ.
ಮುಂಡರಗಿ ತಾಲೂಕಿನ ಸಿಂಗಟಾಲೂರು ವೀರಭದ್ರೇಶ್ವರ ದೇವರ ದರ್ಶನ ಪಡೆದು ವಾಪಸ್ಸ ಹುಬ್ಬಳ್ಳಿಗೆ ಹೋಗುವಾಗ ಈ ದುರಂತ ಸಂಭವಿಸಿದೆ. KA -25-AB 2702 ನಂಬರ್ ಇರುವ ಕಾರಿನಲ್ಲಿ ಇದ್ದವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಮುಂಡರಗಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.