ಗದಗ: ತಾಲೂಕಿನ ನಾಗಾವಿ ಗ್ರಾಮದ ವ್ಯಾಪ್ತಿಯಲ್ಲಿರುವ ಜಿಮ್ಸ್ ಆಸ್ಪತ್ರೆ ಔಷಧ ಉಗ್ರಾಣದಲ್ಲಿ ಮಳೆ ನೀರು ಅವಾಂತರ ಸೃಷ್ಟಿಸಿದೆ. ಆಸ್ಪತ್ರೆಯ ನೆಲ ಮಹಡಿಯಲ್ಲಿರುವ ಮುಖ್ಯ ಡ್ರಗ್ ಸ್ಟೋರ್ನಲ್ಲಿ ಮಳೆ ನೀರು ತುಂಬಿದ ಪರಿಣಾಮ ಕೋಟ್ಯಂತರ ಮೌಲ್ಯದ ಔಷಧಿಗಳು, ಮೆಡಿಕಲ್ ಉಪಕರಣಗಳು ಹಾಳಾಗುವ ಹಂತದಲ್ಲಿವೆ.
ಸೋಮವಾರ ರಾತ್ರಿಯಿಂದ ಜಿಲ್ಲೆಯಾದ್ಯಂತ ವರುಣನ ಅಬ್ಬರ ಜೋರಾಗಿದೆ. ಸತತ ಮಳೆ ಹಾಗೂ ಆಸ್ಪತ್ರೆ ಪಕ್ಕದ ಗುಡ್ಡದ ನೀರು ಹರಿದು ಆಸ್ಪತ್ರೆ ನೆಲ ಮಹಡಿ ಜಲಾವೃತವಾಗಿದೆ. ಸುಮಾರು ಮೂರು ಅಡಿಯಷ್ಟು ನೀರು ಸಂಗ್ರಹವಾಗಿದೆ. ಗೋಡೌನ್ನ ರ‍್ಯಾಕ್ ನಲ್ಲಿರಿಸಿದ್ದ ಸಿರಿಂಜ್, ಸ್ಯಾನಿಟೈಜರ್, ಟ್ಯಾಬ್ಲೆಟ್ ತುಂಬಿದ ಡಬ್ಬ, ಸರ್ಜಿಕಲ್ ಗ್ಲೌಸ್, ಔಷಧಿ ಬಾಟಲಿಗಳು ನೀರಿನಲ್ಲಿ ತೇಲಿ ಹಾಳಾಗಿವೆ.
ಇದನ್ನೂ ಓದಿ: ನೀರಿನಲ್ಲಿ ಕೊಚ್ಚಿಹೋದ ಆಟೋ: ಜೀವ ಉಳಿಸಿಕೊಂಡು ಮನೆಗೆ ಬಂದ ಚಾಲಕ
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಪಂಪ್ ಸೆಟ್ ಮೂಲಕ ನೀರು ಖಾಲಿ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಆದರೆ, ಚಿಕ್ಕ ವಸ್ತುಗಳು ಪಂಪ್ಸೆಟ್ನ ಪೈಪ್ಗೆ ಸಿಲುಕಿ ನೀರು ಎತ್ತೋದಕ್ಕೆ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಜಿಮ್ಸ್ ಆಸ್ಪತ್ರೆಯ ನರ್ಸಿಂಗ್ ಸ್ಟಾಫ್, ಡ್ರಗ್ ಹೌಸ್ ಸಿಬ್ಬಂದಿಯೇ ಔಷಧಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಮುಂದಾಗಿದ್ದಾರೆ.
4 ಕೋಟಿ ರೂಪಾಯಿ ಮೌಲ್ಯದ ಔಷಧಿಗಳು: ಮುಖ್ಯ ಡ್ರಗ್ ಗೋಡೌನ್ನಲ್ಲಿ ಅಂದಾಜು 4 ಕೋಟಿ ರೂಪಾಯಿ ಮೌಲ್ಯದ ಔಷಧಿ ಸಂಗ್ರಹವಾಗಿತ್ತು ಎನ್ನಲಾಗ್ತಿದೆ. ಇದರಲ್ಲಿ ಸುಮಾರು ಒಂದು ಕೋಟಿ ಮೌಲ್ಯದ ಸಾಮಗ್ರಿ ಹಾಳಾಗಿರುವ ಬಗ್ಗೆಯೂ ಅಂದಾಜಿಸಲಾಗಿದೆ.
ಜಿಮ್ಸ್ ನಿರ್ದೇಶಕಿ ರೇಖಾ ಸೋನವಣೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಊಹೆಗೂ ನಿಲುಕದ ರೀತಿಯಲ್ಲಿ ಗೋಡೌನ್ಗೆ ನೀರು ನುಗ್ಗಿದೆ. ಮೊದಲು ಔಷಧಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲು ಮುಂದಾಗಿದ್ದೇವೆ. ಬಹುತೇಕ ಔಷಧಿಗಳ ಪ್ಯಾಕೇಟ್ ಏರ್ ಸೀಲ್ ಆಗಿದೆ. ಸಮಿತಿ ರಚನೆ ಮಾಡಿ ರೀಯೂಸ್ ಮಾಡಬಹುದಾದ ಔಷಧಿಗಳ ಪಟ್ಟಿ ಮಾಡುತ್ತೇವೆ. ಔಷಧಿ ಕೊರತೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ನಾಲ್ಕು ತಿಂಗಳ ಹಿಂದೆಯೇ ಡ್ರಗ್ ಹೌಸ್ ಸ್ಥಳಾಂತರಕ್ಕೆ ಶಿಫಾರಸು?: ಜಿಮ್ಸ್ ಆಸ್ಪತ್ರೆಯ ನೆಲ ಮಹಡಿ ಇತ್ತೀಚೆಗೆ ಸೋರುತ್ತಿದೆ. ಆಗಾಗ ಮಳೆ ಬಂದಾಗ ಸಣ್ಣಮಟ್ಟದಲ್ಲಿ ನೀರು ಹರಿದು ಬರುತ್ತಲೇ ಇತ್ತು. ಹೀಗಾಗಿ ಮುಖ್ಯ ಮತ್ತು ಉಪ ಗೋಡೌನ್ಗಳನ್ನು ಶಿಫ್ಟ್ ಮಾಡುವ ಪ್ರಸ್ತಾವವನ್ನು ಗೋಡೌನ್ ಅಧಿಕಾರಿಗಳು ನಾಲ್ಕು ತಿಂಗಳ ಹಿಂದೆಯೇ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದರು. ಹೀಗಿದ್ರೂ ಸ್ಥಳಾಂತರ ಮಾಡದೇ ಇರೋದು ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಗದಗ ಜಿಲ್ಲೆಯಲ್ಲಿ ಭಾರಿ ಮಳೆ.. ಗ್ರಾಮಗಳು ಮುಳುಗುವ ಭೀತಿ, ಊಟ ನಿದ್ದೆ ಇಲ್ಲದೇ ಕಣ್ಣೀರು ಹಾಕುತ್ತಿರುವ ಜನ