ಗದಗ: ತುಂಬಿ ಹರಿಯುತ್ತಿರುವ ನದಿ ದಾಟುವಾಗ ನೀರಿನ ರಭಸಕ್ಕೆ ನಾಪತ್ತೆಯಾಗಿದ್ದ ವ್ಯಕ್ತಿಯ ಪತ್ತೆ ಕಾರ್ಯ ಇಂದೂ ಸಹ ಮುಂದುವರೆದಿದೆ. ಸತತ ನಾಲ್ಕು ದಿನಗಳಿಂದ ಬೋಟ್ ಮೂಲಕ ಪೊಲೀಸರು ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೊಣ್ಣೂರ ಗ್ರಾಮದ ನಿವಾಸಿ ವೆಂಕನಗೌಡ ಸಾಲಿಗೌಡ್ರ ಎಂಬಾತ ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಬೆಳಗ್ಗೆ ಹೊಲಕ್ಕೆ ಹೋಗಿ ವಾಪಸ್ ಕೊಣ್ಣೂರಿಗೆ ಮರಳುವ ವೇಳೆ ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿದ್ದು, ಮಲಪ್ರಭಾ ನದಿಯನ್ನು ದಾಟುವ ವೇಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ.
ಇವರು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮದ ಬಳಿ ಇದ್ದ ಹೊಲಕ್ಕೆ ಹೋಗಿದ್ದರು. ಸೇತುವೆ ಮೇಲೆ ಐದು ಅಡಿಯಷ್ಟು ನೀರು ಇದ್ದು ಅದನ್ನು ದಾಟುವಾಗ ಅವಘಡ ಸಂಭವಿಸಿದೆ. ಇನ್ನು ನರಗುಂದ ಪೊಲೀಸರು ಮತ್ತು ಬಾದಾಮಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.