ಗದಗ: ಆನ್ಲೈನ್ ಕ್ಲಾಸ್ ನೆಪದಲ್ಲಿ ಪಬ್ಜಿ ಗೇಮ್ ಆಡುತ್ತಿದ್ದ ಯುವಕನಿಗೆ, ಗೇಮ್ ಆಡಬೇಡ ಎಂದು ಪೋಷಕರು ಬೈದು ಬುದ್ದಿಮಾತು ಹೇಳಿ ಮೊಬೈಲ್ ಕಸಿದುಕೊಂಡಿದ್ದಾರೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಹಿರೆಪೇಟೆ ನಿವಾಸಿ ಕಾರ್ತಿಕ್ ಬುಲಿ (17) ಎಂಬ ಯುವಕ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಪಬ್ಜಿ ಗೇಮ್ಗೆ ಯುವಕ ಮಾರುಹೋಗಿದ್ದ. ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಆನ್ಲೈನ್ ಕ್ಲಾಸ್ ನೆಪದಲ್ಲಿ ಯಾವಾಗಲೂ ಗೇಮ್ ಆಡುತ್ತಿದ್ದ.
ಇದನ್ನು ಗಮನಿಸಿದ ಪೋಷಕರು ಗೇಮ್ ಆಡ್ತಿಯಾ, ಓದು ಅಂತ ಬೈದು ಮೊಬೈಲ್ ಕಸಿದುಕೊಂಡಿದ್ದಾರೆ. ಸಾಕಷ್ಟು ಕೇಳಿದ್ರೂ, ಮೊಬೈಲ್ ಕೊಡದ ಹಿನ್ನಲೆ ಮನನೊಂದು ನೇಣಿಗೆ ಶರಣಾಗಿದ್ದಾನೆ. ಇದನ್ನು ನೋಡಿದ ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರು ಪ್ರಯೋಜನವಾಗಿಲ್ಲ.
ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಣೆಗೆ ನಡೆಸಿದ್ದಾರೆ. ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.