ಗದಗ: ಪ್ರತ್ಯೇಕ ಪಂಚಾಯಿತಿಗಾಗಿ ಗ್ರಾಪಂ ಚುನಾವಣೆಯನ್ನೇ ಬಹಿಷ್ಕರಿಸಿದ್ದ ಗ್ರಾಮಸ್ಥರಿಗೆ ನಾಮಪತ್ರ ಕೊನೆಯ ದಿನದಂದು ಪರವೂರಿನ ವ್ಯಕ್ತಿಯೊಬ್ಬ ನಾಮಪತ್ರ ಸಲ್ಲಿಸಿ ಶಾಕ್ ನೀಡಿದ್ದಾನೆ. ಗ್ರಾಮ ಪಂಚಾಯಿತಿ ನಿಯಮಾವಳಿ ಪ್ರಕಾರ ಅವರು ಅವಿರೋಧವಾಗಿ ಆಯ್ಕೆಯಾಗುತ್ತಾರೆ ಎನ್ನಲಾಗಿದೆ.
ಈ ಘಟನೆ ನಡೆದಿರುವುದು ಗದಗ ಜಿಲ್ಲೆಯ ನೀಲಗುಂದ ಗ್ರಾಮದಲ್ಲಿ. ಪ್ರತ್ಯೇಕ ಪಂಚಾಯಿತಿಗಾಗಿ ಆಗ್ರಹಿಸಿ ಚಿಂಚಲಿ ಗ್ರಾಪಂ ವ್ಯಾಪ್ತಿಗೆ ಬರುವ ನೀಲಗುಂದ ಗ್ರಾಮಸ್ಥರು ಈ ಬಾರಿಯ ಗ್ರಾಪಂ ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿದಿದ್ದರು. ಯಾರೂ ನಾಮಪತ್ರ ಸಲ್ಲಿಸಬಾರದು ಎಂದು ತಾಕೀತು ಮಾಡಿದ್ದರು. ಆದರೆ, ಗ್ರಾಮಸ್ಥರು ಹಾಕಿದ್ದ ಲೆಕ್ಕಾಚಾರಗಳೆಲ್ಲವೂ ಇದೀಗ ತಲೆಕೆಳಗಾಗಿವೆ.
ಚಿಂಚಲಿ ಗ್ರಾಮದ ಅಭ್ಯರ್ಥಿ ವೀರೇಂದ್ರ ಲಕ್ಷ್ಮೀಗುಡಿ ಎಂಬಾತ ನೀಲಗುಂದದ ಮೊದಲ ವಾರ್ಡ್‌ನ ಸಾಮಾನ್ಯ ಮೀಸಲು ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದಾನೆ. ಬೇರೊಂದು ಊರಿನ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಯಿಂದಾಗಿ ಈಗ ನೀಲಗುಂದ ಗ್ರಾಮಸ್ಥರು ದಿಗ್ಬ್ರಾಂತರಾಗಿದ್ದಾರೆ. ಈ ಬಗ್ಗೆ ಚಿಂಚಲಿ ಪಂಚಾಯಿತಿ ಚುನಾವಣಾಧಿಕಾರಿ ಮೆಣಸಿನಕಾಯಿ ಅವರು ಸ್ಪಷ್ಟಪಡಿಸಿದ್ದಾರೆ.
ಚುನಾವಣೆ ಬಹಿಷ್ಕರಿಸಿದ ಗ್ರಾಮದಲ್ಲಿ ನಾಮಪತ್ರ ಸಲ್ಲಿಸಲು ಕಾರಣವೇನು ಎಂಬ ಪ್ರಶ್ನೆಗೆ ಉತರಿಸಿದ ವೀರೇಂದ್ರ, ಆ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಜೊತೆಗೆ ಗ್ರಾಮದಲ್ಲಿ ಕೇವಲ ಮೂರು ವಾರ್ಡ್ಗಳಿದ್ದು, ಸುಮಾರು 30 ಜನ ಸ್ಪರ್ಧಿಸಲು ತೀರ್ಮಾನಿಸಿದ್ದರು. ಗೊಂದಲಕ್ಕೀಡಾದ ಗ್ರಾಮಸ್ಥರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದನ್ನು ಬಿಟ್ಟು ನಮ್ಮ ಊರಿಗೆ ಪ್ರತ್ಯೇಕ ಪಂಚಾಯಿತಿ ಬೇಕು ಎಂಬ ತೀರ್ಮಾನಕ್ಕೆ ಬಂದರು. ಆಗ ನಾನು ನಾಮಪತ್ರ ಸಲ್ಲಿಸಿದೆ. ನಾನು ಗ್ರಾಮದ ಅಭಿವೃದ್ಧಿಗೆ ಶ್ರಮಿಸುವೆ ಎಂದರು.