ಗದಗ: ಕೊರೊನಾ ಹಿನ್ನೆಲೆಯಲ್ಲಿ ಎಲ್ಲಾ ಶಾಲಾ, ಕಾಲೇಜುಗಳು ಬಂದ್ ಆಗಿವೆ. ಮಕ್ಕಳು ಇದೀಗ ಮೂಬೈಲ್ ಮೂಲಕ ಅಥವಾ ಟಿವಿಯ ಮೂಲಕ ಆನ್ಲೈನ್ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಇದು ದೊಡ್ಡ ಸಮಸ್ಯೆಯಾಗಿದ್ದು, ಮನೆಯಲ್ಲಿ ಟಿವಿ ಅಥವಾ ಸ್ಮಾರ್ಟ್ ಫೋನ್ ಇರಬೇಕು. ಇಲ್ಲ ಅಂದ್ರೆ ಮಕ್ಕಳ ಅಭ್ಯಾಸ ಹದಗೆಡುವಂತಾಗಿದೆ.
ಮಕ್ಕಳ ಆನ್ಲೈನ್ ಪಾಠಕ್ಕಾಗಿ ತಾಯಿಯೊಬ್ಬಳು, ತನ್ನ ಚಿನ್ನದ ತಾಳಿಯನ್ನು ಅಡವಿಟ್ಟು ಮಕ್ಕಳಿಗೆ ಟಿವಿ ತಂದುಕೊಟ್ಟು ಓದಿಗೆ ಅನುಕೂಲ ಮಾಡಿಕೊಟ್ಟಿದ್ದಾಳೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರ್ ನಾಗನೂರ ಗ್ರಾಮದ ಕಸ್ತೂರಿ ಎಂಬ ಮಹಿಳೆ, ತನ್ನಿಬ್ಬರ ಮಕ್ಕಳ ಶಿಕ್ಷಣಕ್ಕಾಗಿ ಈ ತ್ಯಾಗ ಮಾಡಿದ್ದಾರೆ.
ಮಗಳು 8 ನೇ ತರಗತಿಯಲ್ಲಿ ಹಾಗೂ ಮಗ 7ನೇ ತರಗತಿಯಲ್ಲಿ ಓದುತ್ತಿದ್ದಾರೆ. ಆದ್ರೆ, ಈಗ ಮಕ್ಕಳಿಗೆ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಪಾಠವನ್ನು ಕೇಳಲು ಶಿಕ್ಷಕರು ಪ್ರತಿದಿನ ಕರೆ ಮಾಡಿ ಟಿವಿ ನೋಡಿ ಅಂತ ಹೇಳ್ತಿದ್ರು. ಮನೆಯಲ್ಲಿ ಟಿವಿ ಇಲ್ಲದ ಕಾರಣ ಮಕ್ಕಳಿಗೆ ಟಿವಿ ನೋಡೋದಕ್ಕೆ ಆಗ್ತಿರಲಿಲ್ಲ. ಜೊತೆಗೆ ಶಿಕ್ಷಕರು ಕೇಳಿದ ಪ್ರಶ್ನೆಗೆ ಉತ್ತರಿಸಲು ಮಕ್ಕಳಿಗೆ ಸಾಧ್ಯವಾಗುತ್ತಿರಲಿಲ್ಲ.
ಇವರ ಮನೆಯಲ್ಲಿ ಈ ಮೊದಲು ಇದ್ದ ಟಿವಿ ಸುಟ್ಟು ಹೋಗಿದೆ. ಹಾಗಾಗಿ ಮಕ್ಕಳು ಟಿವಿ ನೋಡಲು ಕಷ್ಟಪಡ್ತಿದ್ರು. ಬೇರೆಯವರ ಮನೆಗೆ ಹೋದ್ರೆ ಅವರು ಸಿನಿಮಾ ಇನ್ನಿತರ ಕಾರ್ಯಕ್ರಮಗಳನ್ನು ನೋಡ್ತಿದ್ರು. ಹೀಗಾಗಿ ಮಕ್ಕಳ ವಿದ್ಯಾಭ್ಯಾಸ ಹದಗೆಡುತ್ತೆ ಅಂತ ಆ ತಾಯಿ ಟಿವಿಯೊಂದನ್ನು ಖರೀದಿಸಲು ನಿರ್ಧರಿಸಿದ್ದಾಳೆ.
ಮೊದಲೇ ಚಿಕ್ಕ ಗ್ರಾಮ ಲಾಕ್ಡೌನ್ನಿಂದಾಗಿ ಕೆಲಸವಿಲ್ಲದೇ ಕೈಯಲ್ಲಿ ಹಣವಿಲ್ಲದೇ ಕಂಗಾಲಾಗಿದ್ದ ಇವರು, ಮಕ್ಕಳ ಗೋಳು ನೋಡಲು ಸಾಧ್ಯವಾಗದೆ ದಿಢೀರ್ ನಿರ್ಧಾರಕ್ಕೆ ಬಂದು ತಮ್ಮ ಕೊರಳಲಿದ್ದ ಚಿನ್ನದ ತಾಳಿಯನ್ನು ಅಡವಿಟ್ಟಿದ್ದಾರೆ. ಕೊನೆಗೆ ಅಂದುಕೊಂಡ ನಿರ್ಧಾರದಂತೆ 32 ಇಂಚಿನ ಒಂದು ಸ್ಯಾಮ್ಸಂಗ್ ಕಂಪನಿಯ ಟಿವಿಯನ್ನು ತಂದು ಮಕ್ಕಳ ವಿದ್ಯಾರ್ಜನೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಕಸ್ತೂರಿಯವರ ಪತಿ ಕೂಲಿ ಕೆಲಸ ಮಾಡ್ತಾರೆ. ಇಬ್ಬರು ಕೂಲಿ ಮಾಡಿಯೇ ಕುಟುಂಬ ಸಾಗಿಸ್ತಾರೆ. ಆದರೆ ಮೊದಲೇ ಕೂಲಿ ಕೆಲಸ ಇಲ್ಲದೆ ಕಂಗಾಲಾಗಿದ್ದ ದಂಪತಿಗೆ ಇದೊಂದು ದೊಡ್ಡ ಸಮಸ್ಯೆಯಾಗಿ ಕಾಡಿದೆ. ಮಕ್ಕಳು ಚೆನ್ನಾಗಿ ಕಲಿತರೆ ಸಾಕು, ಹಂತ ಹಂತವಾಗಿ ಹಣ ಕಟ್ಟಿ ತಾಳಿ ಬಿಡಿಸಿ ಕೊಳ್ಳಬಹುದು ಅಂತ ವಿಚಾರ ಮಾಡಿ 20 ಸಾವಿರ ರೂಪಾಯಿಗೆ ತನ್ನ ಕೊರಳಲ್ಲಿರೋ ತಾಳಿ ಅಡವಿಟ್ಟು, 14 ಸಾವಿರ ರೂ.ಗೆ ಟಿವಿ ಖರೀದಿ ಮಾಡಿಕೊಂಡು ಬಂದಿದ್ದಾರೆ.
ಸದ್ಯ ಅವರಿಗೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿದ್ದ ದೊಡ್ಡ ಸಮಸ್ಯೆ ಪರಿಹರಿಸಿಕೊಂಡಿದ್ದಾರೆ. ಆದರೆ ಮುಂದೆ ಅಡವಿಟ್ಟ ತಾಳಿಯನ್ನು ಕೂಲಿ ಮಾಡಿದ ಸಂಬಳದಲ್ಲಿ ಕುಟುಂಬ ನಿರ್ವಹಣೆ ಮಾಡಿ ಉಳಿದ ಹಣವನ್ನು ಕಟ್ಟಿ ತಾಳಿ ಬಿಡಿಸಿಕೊಳ್ಳಬಹುದು ಅಂತ ಯೋಚನೆ ಮಾಡಿದ್ದಾರೆ. ಇನ್ನು ಇವರಿಗೆ ನಾಲ್ಕು ಜನ ಮಕ್ಕಳಿದ್ದು, ಓರ್ವ ಹೆಣ್ಣು ಮಗಳನ್ನು ಈಗಾಗಲೇ ಮದುವೆ ಮಾಡಿಕೊಡಲಾಗಿದ್ದು, ಅವಳ ಮದುವೆಗಾಗಿ 1 ಲಕ್ಷ ರೂ.ಸಾಲ ಮಾಡಿಕೊಂಡಿದ್ದಾರೆ. ಈ ನಡುವೆ ಮಕ್ಕಳಿಗಾಗಿ ಟಿವಿ ಖರೀದಿ ಮಾಡಿದ್ದು, ಇವರ ಈ ಮಹತ್ಕಾರ್ಯಕ್ಕೆ ಮಕ್ಕಳೂ ಸಹ ಚೆನ್ನಾಗಿ ಓದುತ್ತೇವೆ ಅಂತಿದ್ದಾರೆ.
ಕೊರೊನಾ ಹಾವಳಿಯಿಂದ ಈ ಪರಿಸ್ಥಿತಿ ಎಲ್ಲಿಯವರೆಗೆ ಮುಂದುವರೆಯುತ್ತೋ ಯಾರಿಗೂ ಗೊತ್ತಿಲ್ಲ. ಆದ್ರೆ ಪರಿಸ್ಥಿತಿ ಹೀಗೆ ಮುಂದುವರಿದರೆ ಬಡಮಕ್ಕಳ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತೆ. ಹೀಗಾಗಿ ಬಡ ಜನ ಮಕ್ಕಳಿಗೆ ಏನಾದರೂ ಪರಿಹಾರ ಕಂಡುಕೊಂಡು ಇಂತವರ ಕಣ್ಣೀರು ಒರೆಸಬೇಕಾದ ಅನಿವಾರ್ಯತೆ ಇದೆ.