ಗದಗ: ಮೊಹರಂ ಮುಸ್ಲಿಮರ ಪಾಲಿಗೆ ಪವಿತ್ರ ಹಬ್ಬ. ಇಲ್ಲೊಂದು ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಒಂದೇ ಒಂದು ಕುಟುಂಬ ನೆಲೆಸಿಲ್ಲ. ಹೀಗಿದ್ದರೂ ಹಿಂದೂಗಳು ಈ ಹಬ್ಬ ಆಚರಣೆ ಮಾಡ್ತಾ ಬರ್ತಿದ್ದಾರೆ.
ಅಂದಾಜು ಸುಮಾರು ಎರಡೂವರೆ ಸಾವಿರ ಜನಸಂಖ್ಯೆ ಹೊಂದಿರುವ ರೋಣ ತಾಲೂಕಿನ ಹಿರೇಮಣ್ಣೂರ ಗ್ರಾಮದಲ್ಲಿ ನೂರಾರು ವರ್ಷಗಳಿಂದ ಮೊಹರಂ ಆಚರಣೆ ನಡೆಯುತ್ತದೆ. ಇಲ್ಲಿ ಮಸೀದಿಗೆ ಸ್ವಂತ ಕಟ್ಟಡವಿಲ್ಲ. ಹಿಂದೂಗಳೇ ಸೇರಿ ಬಯಲಲ್ಲಿ ತಗಡಿನ ಟೆಂಟ್ ಕಟ್ಟಿ ನಿರ್ಮಾಣ ಮಾಡಿದ ಮಸೀದಿಯೊಂದರಲ್ಲಿ ಪ್ರತಿ ವರ್ಷ ಮೊಹರಂ ಆಚರಿಸುತ್ತಿದ್ದಾರೆ.
ಈ ಗ್ರಾಮದಲ್ಲಿ ವಾಲ್ಮೀಕಿ, ಕುರುಬರು, ಲಿಂಗಾಯತರು, ಕುರುಹಿನಶೆಟ್ಟಿ ಜನಾಂಗದವರು ಸೇರಿದಂತೆ ಹಲವು ಜಾತಿಯ ಜನ ಈ ಹಬ್ಬ ಮಾಡ್ತಿದ್ದಾರೆ. ವಿಶೇಷ ಅಂದ್ರೆ, ಮೊಹರಂ ಆಚರಣೆ ನಿಮಿತ್ತ ಐದು ದಿನಗಳ ಕಾಲ ಜರುಗುವ ಓದಿಸುವಿಕೆ, ದೇವರ ಕೆಂಡ ಸೇವೆ, ದೇವರು ಹಾಗೂ ಡೋಲಿ ಹೊರುವುದು ಸೇರಿ ಎಲ್ಲ ಆಚರಣೆಗಳೂ ಹಿಂದೂಗಳಿಂದಲೇ ನಡೆಯುತ್ತಿದೆ.
ಪಾಂಜಾಗಳು ಬೇಡಿದ ವರವನ್ನು ಪಾಲಿಸುತ್ತವೆ ಎಂಬ ನಂಬಿಕೆಯಿಂದ ಕಾರ್ಯ ನಿಮಿತ್ಯ ಗ್ರಾಮದಿಂದ ಹೊರಗಿರುವ ಪ್ರತಿಯೊಬ್ಬರೂ ಗುದ್ದಲಿ ಹಾಕುವ ದಿನದಿಂದ ಮೊಹರಂ ಕೊನೆಯ ದಿನದವರೆಗೂ ಆಗಮಿಸುತ್ತಾರೆ. ಈ ವೇಳೆ ನಡೆಯುವ ವಿಶಿಷ್ಟ ಮೊಹರಂ ಹಬ್ಬದಲ್ಲಿ ಪಾಲ್ಗೊಂಡು ಹರಕೆ ತೀರಿಸುವುದು ಹಿಂದಿನಿಂದ ನಡೆದು ಬರುತ್ತಿರುವ ಸಂಪ್ರದಾಯ.