ಗದಗ: ಕೇವಲ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ನಾಟಕವನ್ನಾಡುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ ಪಾಟೀಲ್, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸುವ ಹಾಗೂ ಬೆಂಗಳೂರು ಗಲಭೆ ಕುರಿತು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ರೈತರಿಗೆ ಸರ್ಕಾರ ಸ್ವಯಂ ಅಧಿಕಾರ ಕೊಟ್ಟಿದೆ. ಯಾರು ಬೇಕಾದರೂ, ಎಲ್ಲಿ ಬೇಕಾದರೂ ಭೂಮಿ ಕೊಂಡುಕೊಳ್ಳಬಹುದು. ಇದು ರೈತರಿಗೆ ಮರಣ ಶಾಸನ ಅಲ್ಲಾ ರೈತನಿಗೆ ಕೊಟ್ಟ ವಿಶೇಷ ಅಧಿಕಾರ ಎಂದರು.
ಕಾಂಗ್ರೆಸ್ನವರಿಗೆ ಹೇಳೋಕೆ ಬೇರೇನೂ ಕೆಲಸ, ಮಾತಿಲ್ಲ. ಭೂ ಸುಧಾರಣೆ ಬಗ್ಗೆ ಮಾತನಾಡುವವರು ಡಿಜೆಹಳ್ಳಿ ಪ್ರಕರಣ ಹೇಳಲಿ. ಅದನ್ನು ಬಿಡ್ತಾರೆ ಗಲಭೆ ಮುಚ್ಚಿ ಕೊಳ್ಳಲು ಯಾವುದಕ್ಕಾದ್ರೂ ಹೋಗ್ತಾರೆ. ಒಬ್ಬ ದಲಿತ ಶಾಸಕನಿಗೆ ರಕ್ಷಣೆ ಕೊಡಲು ಅವರಿಂದಲೇ ಆಗ್ತಿಲ್ಲ. ಕಾಂಗ್ರೆಸ್ ಶಾಸಕನಿಗೆ ಸಾಂತ್ವನ ಹೇಳಲು ಎಷ್ಟು ಜನ ಕಾಂಗ್ರೆಸ್ ನಾಯಕರು, ಎಷ್ಟು ಪ್ರಯತ್ನ ಮಾಡಿದ್ದಾರೆ ಎಂಬುದನ್ನು ಹೇಳಲಿ ಎಂದು ಕಾಂಗ್ರೆಸ್ ನಾಯಕರಿಗೆ ಸಚಿವ ಸಿ.ಸಿ ಪಾಟೀಲ್ ಸವಾಲ್ ಹಾಕಿದರು.
ಇನ್ನು ಯಡಿಯೂರಪ್ಪ ಮುಖ್ಯಮಂತ್ರಿಯಾದ್ರೆ ಮನೆ ಮುಂದೆ ವಾಚ್ಮನ್ ಆಗುತ್ತೀನಿ ಎಂದಿದ್ದ ಜಮೀರ್ ನಾಲಿಗೆಗೆ ಇತಿ-ಮಿತಿ ಇರಬೇಕು. ಪರಿಹಾರ ಅವರ ಹಣ, ಅವರು ಕೊಡಲಿ, ಆದರೆ ಯಾವ ಹೋರಾಟದ ಕೆಲಸಕ್ಕೆ ಕೊಟ್ಟರು ಅಂತ ಹೇಳಲಿ ಎಂದು ಜಮೀರ್ ಅಹ್ಮದ್ಗೆ ಪ್ರಶ್ನೆ ಮಾಡಿದರು.