ಗದಗ: ಮಹದಾಯಿ ವಿಚಾರವಾಗಿ ಸರ್ವೋಚ್ಛ ನ್ಯಾಯಾಲಯ ಈಗಾಗಲೇ 13.45 ಟಿಎಂಸಿಯಷ್ಟು ನೀರಿನ ಬಳಕೆಗೆ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ. ಇದೀಗ ಕೇಂದ್ರ ಸರ್ಕಾರ ನ್ಯಾಯಾಲಯದ ನಿರ್ದೇಶನದಂತೆ ಅಧಿಸೂಚನೆ ಹೊರಡಿಸಿದ್ದು, ಇದು 6 ಕೋಟಿ ಕನ್ನಡಿಗರ ಗೆಲುವಾಗಿದೆ ಅಂತ ರೈತ ಸೇನಾ ಕರ್ನಾಟಕದ ಅಧ್ಯಕ್ಷ ವಿರೇಶ ಸೊಬರದಮಠ ಹರ್ಷ ವ್ಯಕ್ತಪಡಿಸಿದರು.
ಮಹದಾಯಿ ಹೋರಾಟಕ್ಕೆ ಬೆಂಬಲ ಕೊಟ್ಟ ರಾಜ್ಯದ ಜನತೆ ಹಾಗೂ ಮಾಧ್ಯಮದವರಿಗೆ ಅಭಿನಂದನೆ ತಿಳಿಸಿರೋ ಸೊಬರದಮಠ ಆದಷ್ಟು ಬೇಗ ಕಾಮಗಾರಿ ಆರಂಭಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಅಲ್ಲದೇ ಮುಂಬರುವ ಬಜೆಟ್‌ನಲ್ಲಿ ಮಹದಾಯಿ ಯೋಜನೆಗೆ ಹೆಚ್ಚು ಹಣ ಮೀಸಲಿಟ್ಟು ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿದ್ದಾರೆ.
ನಿನ್ನೆ ರಾಜ್ಯದ ಸಚಿವರತಂಡ ಕೇಂದ್ರದ ಜಲಶಕ್ತಿ ಸಚಿವ ಗಜೇಂದ್ರ ಶೇಖಾವತ್ ಅವರನ್ನ ಭೇಟಿ ಮಾಡಿ ಈ ಕುರಿತು ಚರ್ಚೆ ಮಾಡಿತ್ತು. ಇನ್ನು ಅಧಿಸೂಚನೆಗೆ ಗೋವಾ ಮತ್ತು ಮಹರಾಷ್ಟ್ರ ಸರ್ಕಾರಗಳು ಯಾವುದೇ ತಡೆಯೊಡ್ಡದೆ ಇರೋದು ಮಹಾದಾಯಿ ಯೋಜನೆ ಜಾರಿಗೆ ಮನ್ನಣೆ ದೊರತಂತಾಗಿದೆ. ಈಗಾಗಲೇ ಕೇಂದ್ರದ ಹಾಗೂ ರಾಜ್ಯದ ಸಚಿವರು ಅಧಿಸೂಚನೆ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಟ್ವಿಟ್ ಮೂಲಕ ಅಭಿನಂದನೆ ತಿಳಿಸಿದ್ದಾರೆ.