ಗದಗ : 13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲು ದಿನಗಣನೇ ಆರಂಭಗೊಂಡಿದ್ದು, ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಸಮರದಲ್ಲಿ ಭಾಗಿಯಾಗಲು ಈಗಾಗಲೇ ಎಲ್ಲ ಪ್ರಾಂಚೈಸಿ ಪ್ಲೇಯರ್ಸ್ ಸಜ್ಜುಗೊಂಡಿದ್ದು, ತಮ್ಮ ತಮ್ಮ ವಿಭಾಗಗಳಲ್ಲಿ ಮಿಂಚು ಹರಿಸಲು ತುದಿಗಾಲಿನ ಮೇಲೆ ನಿಂತಿದ್ದಾರೆ.
ಈ ನಡುವೆ 13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾಗಿಯಾಗಲು ಕನ್ನಡಿಗರ ದಂಡೇ ವಿದೇಶಕ್ಕೆ ತೆರಳಿದೆ. ಮಯಾಂಕ್ ಅಗರವಾಲ್, ಕರುಣ್ ನಾಯರ್, ರಾಬಿನ್ ಉತ್ತಪ್ಪ, ಕೆ.ಎಲ್ ರಾಹುಲ್, ದೇವದತ್ ಪಡಿಕ್ಕಲ್,ಕೆ. ಗೌತಮ್, ಸ್ಪಿನ್ನರ್ ಜೆ. ಸುಚಿತ್ ಮನೀಷ್ ಪಾಂಡೆ, ಪ್ರಸಿದ್ದಕೃಷ್ಣ, ಶ್ರೇಯಸ್ ಗೋಪಾಲ್, ಅನಿರುದ್ಧ ಜೋಶಿ ವಿವಿಧ ತಂಡದಲ್ಲಿದ್ದಾರೆ.
ವಿಶೇಷವಾಗಿ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಗದಗನ ಯುವ ಕ್ರಿಕೆಟ್ ಪ್ಲೇಯರ್ ಇದ್ದಾರೆ. ಬಲಗೈ ಬ್ಯಾಟ್ಸಮನ್ ಮತ್ತು ಎಡಗೈ ಆಫ್ ಬ್ರೇಕ್ ಬೌಲರ್ ಆಗಿರುವ ಅನಿರುದ್ಧ ಜೋಶಿ ಈಗಾಗಲೇ ಕೆಪಿಎಲ್, ಕರ್ನಾಟಕ ತಂಡದ ಒನ್‌ಡೇ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಗದಗ ನಗರದ ಯುವಕ ಅನಿರುದ್ಧ ಜೋಶಿ ಈ ಸಲದ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡಲಿದ್ದಾರೆ. ಕಳೆದ ಸಲ ಬೆಂಗಳೂರು ತಂಡದಲ್ಲಿದ್ದ ಈ ಪ್ಲೇಯರ್ ಆಡುವ 11 ರ ಬಳಗದಲ್ಲಿ ಸ್ಥಾನ ಪಡೆದುಕೊಂಡಿರಲಿಲ್ಲ.
ಗದಗಿನ ಜಾನೋಪಂಥರ್ ಕ್ರಿಕೆಟ್ ಅಕಾಡೆಮಿಯಲ್ಲಿ ಬ್ಯಾಟಿಂಗ್, ಬೌಲಿಂಗ್ ತರಬೇತಿ ಪಡೆದ ಅನಿರುದ್ಧ, ಅಂತಾರಾಷ್ಟೀಯ ಮಟ್ಟದ ಕ್ರಿಕೆಟ್‌ನಲ್ಲಿ ಗದಗ ಹೆಸರನ್ನು ಗುರುತಿಸುವಂತೆ ಮಾಡಿರುವ ಸುನೀಲ್ ಜೋಶಿಯವರ ಅಣ್ಣನ ಮಗ. ಐಪಿಎಲ್ ಬಿಡ್ಡಿಂಗ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಈತನನ್ನು 20 ಲಕ್ಷ ರೂ. ಮುಖಬೆಲೆಗೆ ಖರೀದಿಸಿದೆ. ಸದ್ಯದ ಭಾರತ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥ ಸುನಿಲ್ ಜೋಶಿ ಹಿರಿಯ ಸಹೋದರ ದಿ. ಅಶೋಕ್ ಜೋಶಿಯವರ ಪುತ್ರನಾಗಿರುವ ಅನಿರುದ್ಧ, ಕ್ರಿಕೆಟ್ ಕುಟುಂಬದಿಂದ ಬಂದಿರುವ ಪ್ರತಿಭೆ. ಇವರ ತಂದೆ ಸಹ ಕ್ಲಬ್ ಮಟ್ಟದ ಕ್ರಿಕೆಟ್ ಪ್ಲೇಯರ್ ಆಗಿದ್ದರು.
ಶಾಲಾ ದಿನಗಳಿಂದ ಕ್ರಿಕೆಟ್ ಅಭ್ಯಾಸ ಆರಂಭಿಸಿದ ಅನಿರುದ್ಧ ಜೋಶಿ, ತನ್ನ ತಂದೆಯೇ ನನ್ನ ಗುರು ಎಂದು ಹೇಳಿದ್ದಾರೆ. ಪ್ರಾರಂಭದಲ್ಲಿ ಕ್ರಿಕೆಟ್ ಅಭ್ಯಾಸ, ತರಬೇತಿ ಹಾಗೂ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದ್ದು, ಗದುಗಿನ ಹಳೆಯ ಕ್ಲಬ್‌ಗಳಲ್ಲೊಂದಾದ ಗದಗ ಸಿಟಿ ಕ್ರಿಕೆಟರ್ಸ್ ಮೂಲಕ (ಈಗಿನ ಜಾನೋಪಂತರ್ ಕ್ರಿಕೆಟ ಅಕಾಡೆಮಿ) ಕ್ರಿಕೆಟ್ ಆರಂಭಿಸಿದ್ದನು. ಹಿರಿಯ ಆಟಗಾರ ಹಾಗೂ ತರಬೇತಿದಾರ ವೀರಣ್ಣ ಜಾನೋಪಂತರ ನೇತೃತ್ವದ ಈ ಕ್ಲಬ್ನಲ್ಲಿ ಅನಿರುದ್ಧ ಜೋಶಿ ಪಳಗಿದ ನಂತರ ಲೀಗ್ ಮಟ್ಟದಲ್ಲಿ, ರಾಜ್ಯ ಅಂಡರ್-19 ತಂಡದಲ್ಲಿ ಮಿಂಚಿದ್ದನು. ನಂತರ ಕೆಪಿಎಲ್‌ನಲ್ಲಿ ಆಲ್‌ರೌಂಡ್ ಆಟದ ಮೂಲಕ ಗಮನ ಸೆಳೆದು ರಾಜ್ಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ಏಕದಿನ ಮತ್ತು ಟಿ-20 ಪಂದ್ಯಗಳಲ್ಲಿ ಗಮನ ಸೆಳೆದಿದ್ದಾನೆ.
ನಾಳೆಯಿಂದ ಆರಂಭಗೊಳ್ಳಲಿರುವ ಐಪಿಎಲ್ ಪಂದ್ಯಾವಳಿಯಲ್ಲಿ ಈ ಯುವಕ ಯಶಸ್ಸು ಪಡೆದು ಗದಗಿನ ಕೀರ್ತಿ ಮತ್ತಷ್ಟು ಹೆಚ್ಚಿಸಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.