ಗದಗ: ಕಪ್ಪತಗುಡ್ಡದಲ್ಲಿ ಚಿನ್ನದ ಗಣಿಗಾರಿಕೆ ನಡೆಸಲು ಶತಾಯಗತಾಯ ಖಾಸಗಿ ಕಂಪನಿಯೊಂದು ತಯಾರಿ ನಡೆಸಿದೆ. ಈ ಹಿಂದೆ ಚಿನ್ನದ ಗಣಿಗಾರಿಕೆಗೆ ಅನುಮತಿ ನಿರಾಕರಿಸಿದ್ದರು. ಇದೀಗ ಮತ್ತೆ ಚಿನ್ನ ಅಗೆಯುವ ಕನಸು ಕಾಣುತ್ತಿದೆ.
ಈ ಹಿಂದೆ ಬಲ್ಡೊಟಾ ಕಂಪನಿ ಚಿನ್ನಗಣಿಗಾರಿಕೆಗೆ ಸಿಲ್ಲಿಸಿದ್ದ ಅರ್ಜಿ ವಜಾಗೊಂಡಿತ್ತು. ಇದೀಗ ಮತ್ತೆ ಇದೇ ಭಾಗದಲ್ಲಿ 40 ಹೆಕ್ಟೇರ್ ಜಾಗದಲ್ಲಿ ಗಣಿಗಾರಿಕೆಗಾಗಿ ಭೂಮಿ ನೀಡುವಂತೆ ಅರ್ಜಿ ಸಲ್ಲಿಸಿದೆ.
ರಾಜ್ಯ, ಕೇಂದ್ರ ಸರ್ಕಾರಗಳ ಮೇಲೆ ಪ್ರಭಾವ ಬೀರಿ ಗಣಿ ಕಂಪನಿಗಳು ಕಪ್ಪತ್ತಗುಡ್ಡದಲ್ಲಿನ ಸಂಪತ್ತು ಬಗೆಯಬೇಕು ಅಂತ ಕುತಂತ್ರ ನಡೆಸಿವೆ ಎಂಬ ಆರೋಪ ಕೇಳಿಬಂದಿದೆ. ಈ ಹಿಂದೆ ಬಲ್ದೊಟಾ ಕಂಪನಿ ಚಿನ್ನದ ಗಣಿಗಾರಿಕೆಗೆ ಕೇಂದ್ರ ಸರ್ಕಾರದ ಅನುಮತಿ ಕೇಳಿತ್ತು. ಆದರೆ ಅಂದು ಗದಗ ತೋಂಟದಾರ್ಯ ಶ್ರೀಗಳ ನೇತೃತ್ವದಲ್ಲಿ ಮಠಾಧೀಶರು, ಪರಿಸರ ಪ್ರೇಮಿಗಳು ಹೋರಾಟ ಮಾಡಿ, ಜೊತೆಗೆ ಕಪ್ಪತ್ತಗುಡ್ಡ ವನ್ಯಜೀವಿ ಧಾಮ ಮಾಡಬೇಕು ಅಂತ ಹೋರಾಟ ಮಾಡಿದ್ದರು.
ಹೀಗಾಗಿ ಅಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಕಪ್ಪತ್ತಗುಡ್ಡ ವನ್ಯಜೀವಿ ಜೀವಿಧಾಮ ಅಂತ ಘೋಷ ಮಾಡಿದ್ದರು. ಇನ್ನೂ ಅಂದು ಬಲ್ದೊಟಾ ಕಂಪನಿಗೆ ಚಿನ್ನದ ಗಣಿಗಾರಿಕೆ ನೀಡಿದ ಅನುಮತಿ ಕೂಡ ರದ್ದಾಗಿದೆ. ಆದ್ರೂ ಕೂಡ ಬಲ್ದೊಟಾ ಕಂಪನಿ ತನ್ನ ಪ್ರಯತ್ನ ಮಾತ್ರ ನಿಲ್ಲಿಸಿಲ್ಲ.
ಈಗ ಮತ್ತೆ ಬಲ್ದೊಟಾ ಕಂಪನಿ ಕಪ್ಪತ್ತಗುಡ್ಡ ವನ್ಯಜೀವಿ ಧಾಮ ಪ್ರದೇಶದ ಜಲ್ಲಿಗೇರಿ ವ್ಯಾಪ್ತಿಯಲ್ಲಿ ಚಿನ್ನದ ಗಣಿಗಾರಿಕೆಗೆ 40 ಹೆಕ್ಟೇರ್ ಭೂಮಿ ನೀಡುವಂತೆ ಗದಗ ಅರಣ್ಯ ಇಲಾಖೆಗೆ ಹೊಸ ಅರ್ಜಿ ಸಲ್ಲಿಸಿದ್ದು, ಅರ್ಜಿ ಡಿಎಫ್ಓ ಹಂತದಲ್ಲಿ ಪರಿಶೀಲನೆಯಲ್ಲಿದೆ.
ಕಪ್ಪತ್ತಗುಡ್ಡ ಲೂಟಿಗೆ ಕೇವಲ ಚಿನ್ನದ ಕಂಪನಿಗಳ ಕೈವಾಡ ಮಾತ್ರವಲ್ಲ. ಗದಗ ಜಿಲ್ಲೆಯ ಹಲವು ಪ್ರಭಾವಿ ರಾಜಕಾರಣಿಗಳ ಕುತಂತ್ರ ಕೂಡ ಇದೆ ಎಂಬ ಆರೋಪವಿದೆ. ಗಣಿ ಕುಳಗಳಿಗೆ ಜಿಲ್ಲೆಯ ಪ್ರಭಾವಿ ಜನಪ್ರತಿನಿಧಿಗಳ ಕುಮ್ಮಕ್ಕು ಇದೆ ಎನ್ನಲಾಗಿದೆ. ಹೀಗಾಗಿಯೇ ಈಗ ಬಲ್ದೊಟಾ ಕಂಪನಿ ಮತ್ತೆ ವನ್ಯಜೀವಿ ಧಾಮ ಪ್ರದೇಶದಲ್ಲಿ ಚಿನ್ನದ ಗಣಿಗಾರಿಕೆಗೆ 40 ಹೆಕ್ಟೇರ್ ಭೂಮಿ ನೀಡಿ ಅಂತ ಅರ್ಜಿ ಹಾಕಿದೆ.
ಆದ್ರೆ ವನ್ಯಜೀವಿ ಧಾಮವಾಗಿರು ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಮಠಾಧೀಶರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಕಪ್ಪತ್ತಗುಡ್ಡ ಪ್ರದೇಶದಲ್ಲಿ ಚಿನ್ನ ಸೇರಿ ಯಾವುದೇ ಗಣಿಗಾರಿಕೆಗೆ ಅವಕಾಶ ನೀಡಬಾರದು. ಒಂದು ವೇಳೆ ಸರ್ಕಾರ ಏನಾದರೂ ಗಣಿ ಕುಳಗಳಿಗೆ ಮಣಿದು ಅನುಮತಿ ಕೊಟ್ಟರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಕಪ್ಪತ್ತಗುಡ್ಡ ಪ್ರದೇಶದಲ್ಲಿ ಅಪಾರ ಔಷಧಿ ಸಸ್ಯಕಾಶಿ ಇದೆ. ಇಂಥ ಅಮೂಲ್ಯ ಸಸ್ಯಕಾಶಿ ಅಭಿವೃದ್ಧಿ ಮಾಡಬೇಕಾದ ಜನಪ್ರತಿನಿಧಿಗಳು ಕಪ್ಪತ್ತಗುಡ್ಡ ಪ್ರದೇಶದಲ್ಲಿ ಚಿನ್ನ ಸೇರಿ ಖನಿಜ ಲೂಟಿಗೆ ಮುಂದಾಗಿದ್ದಾರೆ. ಇಂಥ ದುಸ್ಸಾಹಸದಿಂದ ಗಣಿ ಕಂಪನಿಗಳು, ಜನಪ್ರತಿನಿಧಿಗಳು ಹಿಂದೆ ಸರಿಯಬೇಕು. ಇಲ್ಲವಾದಲ್ಲಿ ಹೋರಾಟ ಎದುರಿಸಲು ಸಜ್ಜಾಗಿ ಎಂದು ಮಠಾಧೀಶರು ಹಾಗೂ ಹೋರಾಟಗಾರರು ಎಚ್ಚರಿಕೆ ರವಾನಿಸಿದ್ದಾರೆ.