ಗದಗ: ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲೆಯ ನರಗುಂದ ತಾಲೂಕಿನ ಪ್ರವಾಹ ಪೀಡಿತ ಕೊಣ್ಣೂರು ಗ್ರಾಮಕ್ಕೆ ಭೇಟಿ ನೀಡಿದ ಅವರು ಸಂತ್ರಸ್ತರ ಕಷ್ಟಗಳನ್ನು ಆಲಿಸಿದರು. ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ ನಂತರ ಜಿಲ್ಲಾಡಳಿತ ಕೈ ಗೊಂಡಿರುವ ಸಂತ್ರಸ್ಥರ ತಾತ್ಕಾಲಿಕ ಶೆಡ್ಗಳನ್ನು ವೀಕ್ಷಣೆ ಮಾಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ಈಗಾಗಲೇ ಹತ್ತು ಕೋಟಿ ರೂಪಾಯಿ ಸಿಎಂ ನೆರೆ ಪರಿಹಾರ ನಿಧಿಗೆ ಘೋಷಣೆ ಮಾಡಿದ್ದೇವೆ. ಆ ಮೊತ್ತದಲ್ಲಿ ನಾವು ಸಂತ್ರಸ್ತರಿಗೆ ಹೊಸ ಮನೆಗಳನ್ನು ಕಟ್ಟಿಕೊಡುವ ಸದುದ್ದೇಶ ಹೊಂದಿದ್ದೇವೆ. ಈಗಾಗಲೇ ಇದರ ಹೊರತಾಗಿ ಐದು ಕೋಟಿ ಮೊತ್ತದಲ್ಲಿ ಸಂತ್ರಸ್ತರಿಗೆ ದಿನನಿತ್ಯದ ಸಾಮಾಗ್ರಿಗಳ ಕಿಟ್ ತಯಾರಿಸಿ ವಿತರಣೆ ಮಾಡಲಾಗಿದೆ ಎಂದರು.
ಪದೇ ಪದೇ ಪ್ರವಾಹಕ್ಕೊಳಗಾಗುವ ಇಂತಹ ಗ್ರಾಮಗಳನ್ನು ಸರ್ಕಾರ ಗುರುತಿಸಿ ಬೇರೆ ಕಡೆ ನಿರ್ಮಿಸಬೇಕು. ಅಲ್ಲದೇ ನಮ್ಮ ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ಈಗಾಗಲೇ ಹಲವು ನೆರೆಪೀಡಿತ ಪ್ರದೇಶಗಳಲ್ಲಿ ನೂತನ ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದೇವೆ. ಅದೇ ರೀತಿ ಜಿಲ್ಲೆಯಲ್ಲೂ ಪ್ರವಾಹ ಪೀಡಿತರಿಗೆ ಮನೆಗಳನ್ನು ಕಟ್ಟಿಕೊಡಲು ಸಿದ್ಧರಿದ್ದೇವೆ. ಸರ್ಕಾರ ಎಷ್ಟು ಬೇಗ ಜಾಗ ಗುರುತಿಸಿ ನಮಗೆ ನೀಡುತ್ತದೆಯೋ ಅಷ್ಟು ತುರ್ತಾಗಿ ಮನೆ ನಿರ್ಮಾಣ ಮಾಡಲಾಗುವುದು ಎಂದರು.