ಗದಗ: ಹೈದರಾಬಾದ್ ದಿಶಾ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಎನ್ಕೌಂಟರ್ ಮಾಡಿದ ವಿಶ್ವನಾಥ್ ಸಜ್ಜನರ್ ಹುಟ್ಟೂರಾದ ರೋಣ ತಾಲೂಕಿನ ಅಸೂಟಿಯಲ್ಲಿ ಗ್ರಾಮಸ್ಥರು ಶಾಲಾ ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಾಚರಿಸಿದರು.
ಹೈದರಾಬಾದ್ ಪಶುವೈದ್ಯ ಅತ್ಯಾಚಾರ ಕೊಲೆ ಪ್ರಕರಣದ ಆರೋಪಿಗಳನ್ನು ಇಂದು ಸೈಬರಾಬಾದ್ ಪೊಲೀಸ್ ಕಮಿಷನರ್ ವಿಶ್ವನಾಥ ಸಜ್ಜನರ್ ಬೆಳ್ಳಂಬೆಳಗ್ಗೆ ಎನ್ಕೌಂಟರ್ ಹೊಡೆದುರುಳಿಸಿದ್ದಾರೆ. ಐಪಿಎಸ್ ಸಜ್ಜನರ ಈ ಸಾಹಸಕ್ಕೆ ದೇಶದೆಲ್ಲೆಡೆ ಪ್ರಶಂಸೆಯ ಮಹಾಪೂರವೇ ವ್ಯಕ್ತವಾಗುತ್ತಿದೆ. ಇಂದು ವಿಶ್ವನಾಥ್ ಸಜ್ಜನರ್ ಅವರ ಹುಟ್ಟೂರಾದ ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಗ್ರಾಮದಲ್ಲಿಯೂ ಕೂಡ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಸಜ್ಜನರ್ ಹುಟ್ಟೂರಾದ ಅಸೂಟಿ ಗ್ರಾಮದಲ್ಲಿ ಅವರ ಸ್ನೇಹಿತರೆಲ್ಲ ಸೇರಿ ಸಂಭ್ರಮಿಸಿ ಗ್ರಾಮದ ಶಾಲಾ ಮಕ್ಕಳಿಗೆ ಸಜ್ಜನರ್ ಅವರ ಬಾಲ್ಯದ ದಿನಗಳನ್ನು ನೆನಪಿಸುತ್ತಾ ಸಿಹಿ ನೀಡಿ ಸಂಭ್ರಮಿಸಿದ್ದಾರೆ. ಇತಿಹಾಸದಲ್ಲಿಯೇ ಇಂತಹ ಮಹತ್ವದ ಕರ್ತವ್ಯ ನಿರ್ವಹಿಸಿರುವ ವಿಶ್ವನಾಥ ಸಜ್ಜನರ್ ನಮ್ಮ ಜಿಲ್ಲಯವರು ಎಂಬುದು ನಮ್ಮ ಹೆಮ್ಮೆ ವಿಚಾರ ಎನ್ನುತ್ತಾರೆ ಗ್ರಾಮಸ್ಥರು.