ಗದಗ: ಕಾಂಗ್ರೆಸ್ ಪ್ರಣಾಳಿಕೆ ಬಂದ ನಂತರ ಬಿಜೆಪಿ ಸಂಪೂರ್ಣವಾಗಿ ತತ್ತರಿಸಿದೆ. ನಮ್ಮ ಪಕ್ಷದ ಪ್ರಣಾಳಿಕೆಗೆ ಉತ್ತರಿಸುವ ನೈತಿಕ ಶಕ್ತಿಯನ್ನು ಬಿಜೆಪಿ ಕಳೆದುಕೊಂಡಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಕೆ.ಪಾಟೀಲ್ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾರ್ವಜನಿಕ ಭಾಷಣದಲ್ಲಿ ಯೋಗಿ ಆದಿತ್ಯನಾಥ್ ಪ್ರಧಾನಿ ಮೋದಿ ಸೇನೆ ರಾಷ್ಟ್ರಕ್ಕೆ ರಕ್ಷಣೆ ಕೊಡುತ್ತಿದೆ ಎಂಬ ದೇಶದ್ರೋಹಿ ಹೇಳಿಕೆ ನೀಡಿದ್ದಾರೆ. ಅದು ಮೋದಿ ಸೇನೆ ಅಲ್ಲ, ಭಾರತದ ಸೇನೆ ಅಂತ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಂವಿಧಾನದ ಉನ್ನತ ಹುದ್ದೆಯಲ್ಲಿರುವ ಯೋಗಿ ಆದಿತ್ಯನಾಥ್ ಮೇಲೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು. ಅಲ್ಲದೆ ಚುನಾವಣೆ ಮುಗಿಯುವವರೆಗೆ ಎಲ್ಲೂ ಮಾತನಾಡದಂತೆ ಆಯೋಗ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಮೋದಿ ವಿರುದ್ಧವೂ ಹರಿಹಾಯ್ದ ಅವರು, ಸೈನಿಕರ ಬಟ್ಟೆ ಹಾಕಿಕೊಂಡು ಪೋಸು ನೀಡಿ ಸೈನಿಕರಿಗೆ ದ್ರೋಹ ಮಾಡಿದ್ದಾರೆ. ಹಾಗಾಗಿ ಅವರಿಗೂ ಸಹ ಚುನಾವಣೆ ಪ್ರಚಾರ ಮಾಡದಂತೆ ಸೂಚನೆ ನೀಡಬೇಕೆಂದು ಕೇಂದ್ರ ಚುನಾವಣೆ ಆಯೋಗಕ್ಕೆ ಆಗ್ರಹಿಸಿದರು.