ಗದಗ: ಹೆದ್ದಾರಿಯಲ್ಲಿರುವ ಪೆಟ್ರೋಲ್ ಬಂಕ್ ಬಳಿ ರಾತ್ರಿ ನಿಲ್ಲಿಸಿದ ವಾಹನಗಳ ಮೇಲೆ ದರೋಡೆಕೋರರು ದಾಳಿ ಮಾಡುತ್ತಿರುವ ಘಟನೆ ಜಿಲ್ಲೆಯ ಮುಂಡರಗಿ ಹೊರವಲಯದಲ್ಲಿ ನಡೆದಿದ್ದು, ಜನರನ್ನು ಬೆಚ್ಚಿಬೀಳಿಸಿದೆ.
ಅರಭಾವಿ-ಚಳ್ಳಕೆರೆ ರಾಜ್ಯ ಹೆದ್ದಾರಿಯ ಮುಂಡರಗಿ ಹೊರವಲಯದ ವಿರೇಶ್ ಎಂಟರ್ ಪ್ರೈಸಸ್ ಪೆಟ್ರೋಲ್ ಬಂಕ್ ಬಳಿಯ ದರೋಡೆ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಚಾಲಕರು ತಡರಾತ್ರಿ ನಿದ್ರೆ ಬರುತ್ತಿದ್ದಂತೆ ಬಂಕ್ ಹಾಗೂ ಡಾಬಾ ಬಳಿ ವಾಹನಗಳನ್ನು ನಿಲ್ಲಿಸಿ, ವಿಶ್ರಾಂತಿ ಮಾಡುವ ವೇಳೆ ದುಷ್ಕರ್ಮಿಗಳು ದಾಳಿ ಮಾಡುತ್ತಿದ್ದಾರೆ.
ಜರ್ಕಿನ್ ಹಾಕಿಕೊಂಡು ಮುಖಕ್ಕೆ ಮಂಕಿ ಕ್ಯಾಪ್ ಅಥವಾ ಕರವಸ್ತ್ರ ಕಟ್ಟಿಕೊಂಡು ಬಂದು ಚಾಕು, ಚೂರಿ, ಪಿಸ್ತೂಲ್ ತೋರಿಸಿ ಬಾಯಿ ಬಿಡದಂತೆ ಬೆದರಿಕೆ ಹಾಕುತ್ತಾರೆ. ಬಳಿಕ ಚಾಲಕ ಹಾಗೂ ಕ್ಲೀನರ್ ಬಳಿಯಿರುವ ಹಣ ಹಾಗೂ ಆಭರಣಗಳನ್ನು ದೋಚುತ್ತಿರುವ ಕೃತ್ಯ ಅನೇಕ ದಿನಗಳಿಂದ ನಡೆಯುತ್ತಿದೆ. ನಾಲ್ವರು ದರೋಡೆಕೋರ ಅಟ್ಟಹಾಸ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಒಂದೇ ತಿಂಗಳಲ್ಲಿ ಇಂತಹ ನಾಲ್ಕೈದು ಪ್ರಕರಣಗಳು ನಡೆದಿವೆ ಎನ್ನಲಾಗುತ್ತಿದೆ. ರಾತ್ರಿ ವೇಳೆ ಮಾರಕಾಸ್ತ್ರಗಳಿಂದ ಏಕಾಏಕಿ ದಾಳಿ ಮಾಡುವ ದರೋಡೆಕೋರರ ದರ್ಪಕ್ಕೆ ಅನೇಕ ವಾಹನ ಚಾಲಕರು, ಕ್ಲೀನರ್ಗಳು ಹಾಗೂ ಬಂಕ್ ಸಿಬ್ಬಂದಿ ಕಂಗಾಲಾಗಿದ್ದಾರೆ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ರೂ ಸಂಬಂಧಿಸಿದ ಪೊಲೀಸರು ಡೋಂಟ್ ಕೇರ್ ಅಂತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಇದನ್ನೂ ಓದಿ: ಶಾಕಿಂಗ್: ಬಳ್ಳಾರಿ, ವಿಜಯನಗರದ 35 ಮಕ್ಕಳಲ್ಲಿ MIS- C, ANEC ಹೊಸ ರೋಗಗಳು ಪತ್ತೆ!