ಗದಗ: ಜಿಲ್ಲಾದ್ಯಂತ ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ವರುಣನ ಆರ್ಭಟಕ್ಕೆ ಅನೇಕ ಕಡೆಗಳಲ್ಲಿ ಮನೆಗಳು ಧರೆಗುರುಳಿವೆ. ನೋಡ ನೋಡುತ್ತಿದ್ದಂತೆ ಆರಂಭವಾದ ಮಳೆ ಭಾರಿ ಹಾನಿಯನ್ನುಂಟು ಮಾಡಿದೆ.
ಭಾರಿ ಮಳೆಯಿಂದ ಗಜೇಂದ್ರಗಡ ತಾಲೂಕಿನ ರಾಜೂರ ಗ್ರಾಮದ ಯಲ್ಲಮ್ಮ ಕಟ್ಟಿಮನಿ ಅವರ ಮನೆಯ ಗೋಡೆ ಕುಸಿದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನು ಮುಂಡರಗಿ ಪಟ್ಟಣದ ಹನುಮಂತ ಮೆದಕನಾಳ ಎಂಬುವರ ಮನೆ ಗೋಡೆ ಕುಸಿದು 5 ಕುರಿಗಳು ಸಾವನ್ನಪ್ಪಿವೆ.
ಸುಮಾರು 20ಕ್ಕೂ ಹೆಚ್ಚು ಕುರಿಗಳಿಗೆ ಗಾಯಗಳಾಗಿವೆ. ಕುರಿ ಮಾಲೀಕ ಹನುಮಂತ, ಮನೆ ಪಕ್ಕದಲ್ಲಿಯೇ ಕುರಿಗಳ ಶೆಡ್ ನಿರ್ಮಿಸಿದ್ದರಿಂದ ಮಳೆಯಿಂದ ಗೋಡೆ ಕುಸಿದು ಈ ಹಾನಿ ಸಂಭವಿಸಿದೆ ಎನ್ನಲಾಗುತ್ತಿದೆ. ಇನ್ನು ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಿಲ್ಲೆಯ ಹಲವೆಡೆ ಮನೆಗಳು ಧರೆಗುರುಳಿದ್ದು ಜನ ಬೀದಿಪಾಲಾಗುವಂತಾಗಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ನೀರು ಹೊರಹಾಕುವಲ್ಲಿ ತಲ್ಲೀನರಾಗಿದ್ದಾರೆ.