ಗದಗ: ಅವರಿಬ್ಬರು ಪರಸ್ಪರ ಪ್ರೀತಿಸಿ ಬಾಳ ಸಂಗಾತಿಗಳಾದರು. ಆದ್ರೆ ಪೊಲೀಸ್ ಇಲಾಖೆಯಲ್ಲಿರುವ ಯುವತಿಯ ತಾಯಿ ಇವರಿಬ್ಬರ ಪ್ರೀತಿ ಮತ್ತು ಮದುವೆಯನ್ನು ಒಪ್ಪಲೇ ಇಲ್ಲ. ಮದುವೆಯಾದ ಜೋಡಿಗೆ ಆಗ ಭಯ ಶುರುವಾಗಿ ಎಸ್‌ಪಿ ಮೊರೆ ಹೋದ್ರು. ಈ ಜೋಡಿ ಪೊಲೀಸ್ ಠಾಣೆ ಮೆಟ್ಟಿಲೇರಿದಾಗಲೂ ಅಲ್ಲಿ ಆಸ್ತಿ-ಅಂತಸ್ತು ಅನ್ನೋದಕ್ಕೆ ಬೆಲೆ ಸಿಗದೇ ಪ್ರೀತಿಯೇ ಗೆದ್ದು ಬೀಗಿದೆ.
ಹೌದು, ತಂದೆ-ತಾಯಿ ಆಸ್ತಿಗೆ ಆಸೆ ಪಡುವುದಿಲ್ಲಾ ಅಂತ ಮುಚ್ಚಳಿಕೆ ಬರೆದುಕೊಟ್ಟ ಬಳಿಕ ಗದಗ ಮಹಿಳಾ ಪಿಎಸ್ಐಯೊಬ್ಬರ ಮಗಳ ಪ್ರೇಮ ಪ್ರಕರಣ ಈಗ ಸುಖಾಂತ್ಯ ಕಂಡಿದೆ. ಪೋಷಕರಿಂದ ಪ್ರಾಣಭಯ ಇದೆ, ನಮಗೆ ರಕ್ಷಣೆ ನೀಡಿ ಅಂತ ಗದಗ ಎಸ್‌ಪಿ ಯತೀಶ್ ಎನ್. ಅವರ ಬಳಿ ರಕ್ಷಣೆ ಕೋರಿ ಬಂದಿದ್ದ ಪ್ರೇಮಿಗಳು ಇನ್ಮುಂದೆ ಭಯವಿಲ್ಲದೆ ಬಾಳ ಪಯಣ ಆರಂಭಿಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ.
ಗದಗ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿರುವ ತಾಯಿ ಹಾಗೂ ಅಗ್ನಿಶಾಮಕ ದಳದಲ್ಲಿ ಹವಾಲ್ದಾರ್ ಆಗಿರುವ ತಂದೆಯಿಂದ ಪ್ರಾಣಬೆದರಿಕೆ ಇದೆ ಮತ್ತು ಅವರಿಂದ ನಮಗೆ ರಕ್ಷಣೆ ಬೇಕು ಅಂತ ಮೇಘಾ ಮುಂಡೆವಾಡಗಿ ಎಂಬ ಯುವತಿ ಎಸ್‌ಪಿ ಯತೀಶ್ ಎನ್. ಅವರ ಸಹಾಯ ಕೋರಿದ್ದರು.
ಹೆಚ್ಚಿನ ಓದಿಗೆ: ಪ್ರೀತಿಸಿ ಮದುವೆಯಾದ ಮಗಳಿಗೆ ಕುಟುಂಬದಿಂದ ಬೆದರಿಕೆ: ರಕ್ಷಣೆಗೆ SP ಮೊರೆ ಹೋದ ಜೋಡಿ
ಏಳು ವರ್ಷಗಳಿಂದ ಪ್ರೀತಿಸುತ್ತಿದ್ದ ಮೇಘಾ ಮತ್ತು ಕೀರ್ತಿನಾಥ ಜೋಡಿ, ಮನೆಯಲ್ಲಿ ಪ್ರೀತಿಗೆ ಒಪ್ಪದ ಕಾರಣ ಆರು ತಿಂಗಳ ಹಿಂದೆಯೇ ಮನೆಬಿಟ್ಟು ಹೋಗಿ ಮುಂಡರಗಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದರು. ಈ ವಿಚಾರ ತಂದೆ ತಾಯಿಗೆ ಗೊತ್ತಾಗಿ ಬೆದರಿಕೆ ಹಾಕಿದ್ದರು ಎಂದು ಮೇಘಾ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. ಹಾಗಾಗಿ ಬಳಿಕ ಎಸ್.ಪಿ ಯತೀಶ್ ಅವರು ಯುವತಿಯ ತಂದೆ ತಾಯಿಯನ್ನು ತಮ್ಮ ಕಚೇರಿಗೆ ಕರೆಯಿಸಿ ಮಾತನಾಡಿ ಮನವೊಲಿಸಿದ್ದಾರೆ. ಈ ವೇಳೆ ಅವರಿಗೆ ನಾವು ಬೆದರಿಕೆ ಹಾಕಿಲ್ಲ ಎಂದು ಪೋಷಕರು ತಿಳಿಸಿದ್ದಾರೆ.
ಯುವತಿ ತಂದೆ-ತಾಯಿಯ ಆಸ್ತಿಗೆ ಆಸೆ ಪಡುವುದಿಲ್ಲ ಅಂತ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದಾರೆ. ಹಾಗೆ ಪೋಷಕರು ಕೂಡ ಮಗಳಿಗೆ ಯಾವುದೇ ರೀತಿಯಲ್ಲೂ ತೊಂದರೆ ನೀಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಇಬ್ಬರ ಒಪ್ಪಂದದಂತೆ ಪ್ರಕರಣ ಸದ್ಯ ಸುಖಾಂತ್ಯ ಕಂಡಿದೆ. ಈ ಜೋಡಿಹಕ್ಕಿಗಳ ಹೊಸ ಜೀವನ ಸುಖಕರವಾಗಿರಲಿ ಎಂದು ಹಾರೈಸೋಣ..