ಗದಗ: ಹಲವು ಹೋರಾಟಗಳ ನಂತರ ಗದಗ ಹಳೆ ಬಸ್ ನಿಲ್ದಾಣಕ್ಕೆ ಪುಟ್ಟರಾಜ ಶ್ರೀಗಳ ಹೆಸರು ನಾಮಕರಣಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಗದಗ ನಗರದಲ್ಲಿ ನವೀಕರಣಗೊಂಡ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಲಿಂಗೈಕ್ಯ ಡಾ.ಪಂಡಿತ ಪುಟ್ಟರಾಜ ಗವಾಯಿಗಳ ಹೆಸರು ನಾಮಕರಣ ಮಾಡುವಂತೆ ಆಗ್ರಹಿಸಿ ಸಾಕಷ್ಟು ಹೋರಾಟ ಮಾಡಲಾಗಿತ್ತು. ಇದೀಗ ಡಿಸಿಎಂ ಲಕ್ಷ್ಮಣ ಸವದಿ ಅವರು ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಆದೇಶ ಪತ್ರ ರವಾನಿಸುವ ಮೂಲಕ ಹಸಿರು ನಿಶಾನೆ ತೋರಿಸಿದಂತಿದೆ.
ಈ ಬಸ್ ನಿಲ್ದಾಣಕ್ಕೆ ಆದರ್ಶ ಪ್ರಾಯರಾದ ಪಂಡಿತ ಪುಟ್ಟರಾಜ ಗವಾಯಿಗಳ ಹೆಸರಿನ ಬೇಡಿಕೆ ನ್ಯಾಯೋಚಿತವಾಗಿದ್ದು, ನಿಯಮನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕಚೇರಿ ಹುಬ್ಬಳ್ಳಿ ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶ ಪ್ರತಿ ರವಾನಿಸಿದ್ದಾರೆ. ಭಕ್ತರ ಆಸೆಯದಂತೆ ನಾಮಕರಣಕ್ಕೆ ಮುಂದಾದ ಹಿನ್ನೆಲೆ ಭಕ್ತರಲ್ಲಿ ವರ್ಷ ವ್ಯಕ್ತವಾಗಿದೆ.
ಡಿಸಿಎಂ ಸಾರಿಗೆ ಇಲಾಖೆಗೆ ಪತ್ರ ಬರೆದ ಹಿನ್ನೆಲೆ, ವಿವಿಧ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಹಾಗೂ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ನಗರದ ಪತ್ರಿಕಾ ಭವನದಲ್ಲಿ ಜಂಟಿಯಾಗಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಲಿಂಗೈಕ್ಯ ಪುಟ್ಟರಾಜರ ಹೆಸರನ್ನು ಹಳೆ ಬಸ್ ನಿಲ್ದಾಣಕ್ಕೆ ಇಡಲು ತಿರ್ಮಾನಿಸಿದ್ದು, ಸ್ವಾಗತಾರ್ಹ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.