ಗದಗ: ಜಿಲ್ಲೆಯಲ್ಲಿ ಪತ್ತೆಯಾದ ಎರಡು ಪಾಸಿಟಿವ್ ಪ್ರಕರಗಳಿಗೆ ಟ್ರಾವೆಲ್ ಹಿಸ್ಟರಿ ಇಲ್ಲದೇ ಇರುವುದರಿಂದ ಸೋಂಕು ತಗುಲಿದ್ದು ಹೇಗೆ ಎಂಬುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.
ರೋಗಿ-166 ವೃದ್ಧೆಯಿಂದ 59 ವರ್ಷದ ರೋಗಿ-304 ವೃದ್ಧೆಗೆ ಕೊರೊನಾ ಹರಡಿತಾ ಅಥವಾ ರೋಗಿ-304, 59 ವರ್ಷದ ವೃದ್ಧೆಯಿಂದ ರೋಗಿ-166 ಸಂಖ್ಯೆಯ ವೃದ್ಧೆಗೆ ಕೊರೊನಾ ಬಂತಾ ಎಂಬುದು ಜಿಲ್ಲಾಡಳಿತಕ್ಕೆ ಯಕ್ಷ ಪ್ರಶ್ನೆಯಾಗಿದೆ.
ಟ್ರಾವೆಲ್ ಹಿಸ್ಟರಿ ಇಲ್ಲದೆಯೇ ಜಿಲ್ಲೆಗೆ ಸೋಂಕು ಹೇಗೆ ಹರಡಿತು ಎಂಬುದನ್ನು ಪತ್ತೆ ಮಾಡುವಲ್ಲಿ ಜಿಲ್ಲಾಡಳಿತದ ತಂಡ ಕಾರ್ಯನಿರತವಾಗಿದೆ. ಸೋಂಕಿತರಿಬ್ಬರು ವಾಸವಾಗಿದ್ದ ರಂಗನವಾಡಿ ಹಾಗೂ ಓಡಾಡಿದ್ದ ಎಸ್.ಎಂ. ಕೃಷ್ಣಾ ನಗರದಲ್ಲಿ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ ಮತ್ತಷ್ಟು ಜನರನ್ನ ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಜಿಲ್ಲಾಧಿಕಾರಿ ರಂಗನವಾಡಿ ಹಾಗೂ ಎಸ್.ಎಂ.ಕೃಷ್ಣಾ ನಗರವನ್ನು ಕಂಟೈನ್ಮೆಂಟ್ ಪ್ರದೇಶವೆಂದು ಘೋಷಿಸಿದ್ದಾರೆ.
ನಿನ್ನೆ ಸೋಂಕು ದೃಢಪಟ್ಟಿರುವ ರೋಗಿ-304, 59 ವರ್ಷದ ವೃದ್ಧೆಗೆ ಕಿವಿ ಕೇಳುವುದಿಲ್ಲ. ಹೀಗಾಗಿ ಸೋಂಕು ಹರಡಿದ್ದು ಹೇಗೆ ಎಂಬುದನ್ನು ಪತ್ತೆ ಹಚ್ಚಲು ಮತ್ತಷ್ಟು ಕಗ್ಗಂಟಾಗಿದೆ. ಇವರಿಗೆ ನಾಲ್ಕು ಜನ ಮಕ್ಕಳು, ಮೂವರು ಗಂಡು ಮಕ್ಕಳು, ಓರ್ವ ಹೆಣ್ಣು ಮಗಳು, ಅಳಿಯ ಹಾಗೂ ಮೊಮ್ಮಗಳು ಇದ್ದಾರೆ. ಎಲ್ಲರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಯಾರ ಜೊತೆಗೆ ಸಂಪರ್ಕ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಜಿಲ್ಲಾಡಳಿತ ಎಲ್ಲಿಲ್ಲದ ಪ್ರಯತ್ನ ನಡಸುತ್ತಿದೆ.
ಮಕ್ಕಳ ಮಾಹಿತಿಯನ್ನು ಆಧರಿಸಿ, ಸಂಪರ್ಕ ಮಾಡಿದವರನ್ನು ಪತ್ತೆ ಮಾಡಲು ಜಿಲ್ಲಾಡಳಿತ ತಂಡ ರಚನೆಗೆ ಮುಂದಾಗಿದೆ. ಈಗಾಗಲೇ ಮೂರು ಜನ ಗಂಡು ಮಕ್ಕಳು, ಮಗಳು ಹಾಗೂ ಅಳಿಯ, ಮೊಮ್ಮಗಳು ಸೇರಿದಂತೆ ಕುಟುಂಬಸ್ಥರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ರವಾನಿಸಲಾಗಿದೆ. ರಂಗನವಾಡಿ ಪ್ರದೇಶದ 416 ಜನರನ್ನು ಹಂತ-ಹಂತವಾಗಿ ತಪಾಸಣೆ ಮಾಡಲಾಗುತ್ತಿದೆ.
ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ರೋಗಿ-166 80 ವರ್ಷದ ವೃದ್ಧೆ ಹಾಗೂ ರೋಗಿ- 304- 59 ವರ್ಷದ ವೃದ್ಧೆ ಇಬ್ಬರು ಸ್ನೇಹಿತೆಯರು. ಇಬ್ಬರು ಕಟ್ಟೆ ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದರು ಎಂದು ತನಿಖೆ ವೇಳೆ ಜಿಲ್ಲಾಡಳಿತಕ್ಕೆ ಸಂಬಂಧಿಕರು ತಿಳಿಸಿದ್ದಾರೆ.