ಗದಗ: ಲಾಕ್‌ಡೌನ್ ಸಮಯದಲ್ಲಿ ಬಹಳಷ್ಟು ರೈತರು ತಾವು ಬೆಳೆದ ಬೆಳೆ ಮಾರಾಟವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ತಮ ಬೆಳೆ ಬಂದರೂ ಸಹ ಲಾಕ್ ಡೌನ್ ನಿಂದ ಬೆಳೆ ಮಾರಾಟವಾಗದೇ ದಿವಾಳಿಯಾಗಿದ್ದಾರೆ. ಆದರೆ, ಗದಗದಲ್ಲಿ ಒಬ್ಬ ಈ ರೈತ ಪರ್ಯಾಯ ಮಾರ್ಗ ಕಂಡು ಕೊಂಡು ಹೆಚ್ಚಿನ ಲಾಭ ಮಾಡಿಕೊಂಡಿದ್ದಾರೆ.
ಹೌದು, ಶಿರಹಟ್ಟಿ ತಾಲೂಕಿನ ಹೊಳಲಾಪುರ ಗ್ರಾಮದ ರೈತ ಮಲ್ಲಿಕಾರ್ಜುನ ಕಂಬಳಿ ಎಂಬುವರು ತಾವು ಬೆಳೆದ ಕಲ್ಲಂಗಡಿ ಹಣ್ಣಿಗೆ ಸ್ಥಳೀಯವಾಗಿಯೇ ಮಾರುಕಟ್ಟೆ ಕಂಡುಕೊಂಡು ಉತ್ತಮ ಆದಾಯ ಗಳಿಸಿದ್ದಾರೆ. ರೈತ ಕಂಬಳಿಯವರು ನಾಲ್ಕು ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದಿದ್ದರು. ಬೆಳೆ ಕಟಾವಿನ ಸಂದರ್ಭದಲ್ಲಿ ಲಾಕ್‌ಡೌನ್ ಘೋಷಣೆಯಾದ್ದರಿಂದ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಕಡಿಮೆಯಾಗಿತ್ತು. ಇದರಿಂದ ವ್ಯಾಪಾರಿಗಳು, ದಲ್ಲಾಳಿಗಳು ಪ್ರತಿ ಟನ್‌ಗೆ ಕೇವಲ 6 ರಿಂದ 7 ಸಾವಿರ ರೂ. ಕೇಳುತ್ತಿದ್ದರು. ಇದರಿಂದ ಚಿಂತೆಗೀಡಾದ ರೈತ, ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿದರು. ಅವರ ಸಲಹೆಯಂತೆ ತಮ್ಮದೇ ಸ್ವಂತ ವಾಹನದಲ್ಲಿ ಮಾರಾಟ ಮಾಡಲು ಇಲಾಖೆಯ ವತಿಯಿಂದ ‘ಗ್ರೀನ್ ಪಾಸ್’ ಪಡೆದುಕೊಂಡರು. ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಲ್ಲಂಗಡಿ ಮಾರಾಟ ಮಾಡಲು ಅವಕಾಶ ಲಭಿಸಿತು.
ಇದುವರೆಗೆ ಒಟ್ಟು ವ್ಯಾಪಾರದಲ್ಲಿ ನಾಲ್ಕು ಲಕ್ಷ ರೂ. ಆದಾಯ ಮಾಡಿಕೊಂಡಿದ್ದಾರೆ. ಪ್ರತಿ ಎಕರೆಗೆ ಅವರು ಖರ್ಚು ಮಾಡಿದ್ದು ಕೇವಲ 50 ಸಾವಿರ ರೂ. ಆದ್ರೆ ಖರ್ಚ ವೆಚ್ಚವೆಲ್ಲ ತೆಗೆದು ಅವರಿಗೆ ಲಾಕ್‌ಡೌನ್ ಸಮಯದಲ್ಲಿಯೇ ಸುಮಾರು 2 ಲಕ್ಷ ರೂ. ಗಿಂತ ಹೆಚ್ಚು ಆದಾಯ ಮಾಡಿಕೊಂಡಿದ್ದಾರೆ. ವಿಶೇಷ ಅಂದ್ರೆ ತಮಗಷ್ಟೇ ಲಾಭವಲ್ಲದೇ ಲಾಕ್‌ಡೌನ್ ಸಮಯದಲ್ಲಿ ಕೆಲಸ ಇಲ್ಲದೇ ಮನೆಯಲ್ಲಿ ಕೂತಿದ್ದ ಊರಿನ ಕೂಲಿ ಕಾರ್ಮಿಕರಿಗೂ ಕೆಲಸ ಕೊಟ್ಟು ಅವರಿಗೂ ಸಹ ಲಾಭ ಮಾಡಿಕೊಟ್ಟಿದ್ದಾರೆ. ದಲ್ಲಾಳಿ ಗಳು ಕೇಳಿದ್ದ ಬೆಲೆಗಿಂತ ಒಂದು ಟನ್‌ಗೆ ಸುಮಾರು 10 ರಿಂದ 12 ಸಾವಿರ ರೂ.ಗೆ ಮಾರಾಟವಾಗಿದೆ ಎಂದು ರೈತ ಮಲ್ಲಿಕಾರ್ಜುನ ಹೇಳಿದರು.
ಸಮಯಕ್ಕೆ ಸರಿಯಾಗಿ ತೋಟಗಾರಿಕೆ ಇಲಾಖೆಯ ಸಲಹೆ ಸಿಕ್ಕಿತು. ಶಿರಹಟ್ಟಿ ತೋಟಗಾರಿಕೆ ಇಲಾಖೆಯ ಅಧಿಕಾರಿ ಸುರೇಶ್ ಕುಂಬಾರ್ ಅವರು ಸಹ ನಮಗೆ ಸಹಾಯ ಮಾಡಿದ್ರು. ಸಲಹೆ ಕೊಟ್ರು ಅಂತ ಹಂಚಿಕೊಂಡ್ರು. ಇವರ ಸಲಹೆಯಂತೆ ಸ್ಥಳೀಯವಾಗಿ, ಸಕಾಲದಲ್ಲೇ ತಮ್ಮ ಬೆಳಗೆ ಮಾರುಕಟ್ಟೆ ಕಂಡುಕೊಂಡರು. ಮಧ್ಯವರ್ತಿ ಇಲ್ಲದೇ ಮಾರಾಟ ಮಾಡಿದ್ದರಿಂದ ಗರಿಷ್ಠ ಲಾಭ ಬಂತು ಅಂತ ವಿವರಿಸಿದರು.
ಇನ್ನು ವಿಶೇಷ ಅಂದ್ರೆ ಇವರು ಬೆಳೆಯುವ ಬೆಳೆಗಳೇ ವಿಶಿಷ್ಟ ಮತ್ತು ವಿಶೇಷ. ವೈಜ್ಞಾನಿಕವಾಗಿ, ವಿಭಿನ್ನವಾಗಿ ಬೆಳೆ ಬೆಳೆಯುತ್ತಾರೆ. ಬಹು ಬೆಳೆ ಪದ್ಧತಿಯನ್ನು ಅವಲಂಬಿಸಿ ಬೆಳೆಯುತ್ತಾರೆ. ಕಲ್ಲಂಗಡಿಯ ಜೊತೆಗೆ ದೀರ್ಘಕಾಲದ ಬೆಳೆಗಳಾದ ಮಹಾಗಣಿ, ಶತಾವರಿ ಬೆಳೆಯನ್ನೂ ಸಹ ಹಾಕಿದ್ದಾರೆ. ಡ್ರಿಫ್ ಮೂಲಕ ನೀರಾವರಿ ಪದ್ದತಿ ಅವಳವಡಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಮಿತ ಖರ್ಚು, ಆದಾಯ ಹೆಚ್ಚು ಅನ್ನೋ ಪದ್ದತಿಯನ್ನ ಅವರು ಅನುಸರಿಸಿ ವರ್ಷ ಕಳೆದಂತೆ ಹೊಸ ಹೊಸ ಪದ್ದತಿಯನ್ನು ಅಳವಡಿಸಿಕೊಂಡಿದ್ದಾರೆ.