ಗದಗ : ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಪರಿಸರ ಉಳಿಸಿ ಅಂತ ಬರೇ ಭಾಷಣದಲ್ಲಿ ಹೇಳಿದ್ದೇ ಆಯಿತು. ಆದ್ರೆ, ಇಲ್ಲೊಬ್ಬ ರೈತ ಪರಿಸರಕ್ಕೆ ಮಾರಕವಾಗಿರೋ ಅದೇ ಪ್ಲಾಸ್ಟಿಕನ್ನು ವಿಶಿಷ್ಟವಾಗಿ ಬಳಸಿ ಅದರಲ್ಲೇ ಹಸಿರು ಗಿಡಗಳು ಜನ್ಮ ತಾಳುವಂತೆ ಮಾಡ್ತಿದಾರೆ.
ಗದಗ ಜಿಲ್ಲೆ ರೋಣ ತಾಲೂಕಿನ ಕೊಟುಮುಚಗಿ ಗ್ರಾಮದ ಸಾವಯವ ಕೃಷಿಕ ವಿರೇಶ ಶಂಕರಪ್ಪ ನೇಗಲಿ ಎಂಬವರು ನಿರುಪಯುಕ್ತ ಪ್ಲಾಸ್ಟಿಕ್ ಚೀಲಗಳನ್ನು ಕಲೆ ಹಾಕುತ್ತಾರೆ. ಅದರಿಂದಲೇ ಶೂನ್ಯ ಬಂಡವಾಳದ ಮೂಲಕ ತಮ್ಮ ಮನೆಯಲ್ಲಿ ಸುಂದರ ಕೈದೋಟ ನಿರ್ಮಿಸಿದ್ದಾರೆ.ಈ ಮೂಲಕ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಭೂತದ ವಿರುದ್ಧ ಸದ್ದಿಲ್ಲದೇ ಸಮರ ಸಾರಿದ್ದಾರೆ.
ಕಿರಾಣಿ ಅಂಗಡಿಗಳಲ್ಲಿ ಖಾಲಿಯಾದ ಪಾನ್ ಮಸಾಲ, ಗುಟ್ಕಾ ಮತ್ತಿತರ ವಸ್ತುಗಳ ಪ್ಲಾಸ್ಟಿಕ್ ಚೀಲ, ಪೊಟ್ಟಣ ಸೇರಿದಂತೆ ಜನರು ಬಳಸಿ ಎಸೆಯೋ ತಂಪು ಪಾನೀಯಗಳ ಬಾಟಲಿಗಳನ್ನು ಹುಡುಕಿ ತರುವ ಇವರು, ಅವುಗಳನ್ನೇ ಮರುಬಳಕೆ ಮಾಡಿ ಪರಿಸರ ಸ್ನೇಹಿ ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ. ವಿರೇಶ ಆರು ಎಕರೆ ಜಮೀನು ಹೊಂದಿದ್ದು, ಕೃಷಿ ಕಾಯಕದ ಬಿಡುವಿನ ವೇಳೆಯಲ್ಲಿ ಈ ರೀತಿ ವಿಶಿಷ್ಠವಾಗಿ ಜನಜಾಗೃತಿ ಮೂಡಿಸ್ತಿದಾರೆ.
ಪ್ಲಾಸ್ಟಿಕ್ ಚೀಲಗಳನ್ನು ಎಲ್ಲೆಂದರಲ್ಲಿ ಬಿಸಾಕಿದರೆ, ಅವುಗಳು ಭೂಮಿಯಲ್ಲಿ ಬೇಗನೇ ಕೊಳೆಯುವುದಿಲ್ಲ. ಅಲ್ಲದೇ, ಪ್ಲಾಸ್ಟಿಕ್ ಬಾಟಲಿಗಳನ್ನು ಉಪಯೋಗಿಸಿದ ನಂತರ ಎಲ್ಲೆಂದರಲ್ಲಿ ಎಸೆಯುತ್ತೇವೆ. ಇದರಿಂದ ಪರಿಸರ ಹಾಳಾಗುತ್ತದೆ ಎನ್ನುವುದು ರೈತ ವಿರೇಶ ನೆಗಲಿಯವರ ಅಭಿಪ್ರಾಯ.
ಪಟ್ಟಣದ ಎಲ್ಲಾ ಕಿರಾಣಿ ಅಂಗಡಿ ಮತ್ತು ತಂಪು ಪಾನೀಯ ಮಾಲೀಕರಿಗೆ ಮನವಿ ಮಾಡುವ ಅವರು, ಅಂಗಡಿಯ ಪಕ್ಕದಲ್ಲಿ ಒಂದು ಚೀಲವನ್ನಿಟ್ಟಿದ್ದಾರೆ. ಅಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಚೀಲ, ಖಾಲಿ ಬಾಟಲಿಗಳನ್ನು ಬಳಸಿಕೊಂಡು ಮಣ್ಣು ಮತ್ತು ಸಾವಯವ ಗೊಬ್ಬರ ತುಂಬಿ ಅದರಲ್ಲಿಯೇ ತರಕಾರಿ ಗಿಡಗಳನ್ನು ಬೆಳೆಯುತ್ತಾರೆ. ಹನಿ ನೀರಾವರಿ ಪದ್ದತಿಯ ಮೂಲಕ ಸಸಿಗಳಿಗೆ ನೀರುಣಿಸುತ್ತಾರೆ. ಈ ರೀತಿಯಾಗಿ ಬೆಳೆಸಿದ ಗಿಡಗಳನ್ನು ಮದುವೆ ಹಾಗೂ ಇತರೆ ಸಮಾರಂಭದ ಸಮಯದಲ್ಲಿ ಬರುವ ಅತಿಥಿಗಳಿಗೆ ನೀಡುತ್ತಾರಂತೆ.
ವಿರೇಶ ಅವರ ಪರಿಸರ ಜಾಗೃತಿ ಕೆಲಸ ಪ್ರಶಂಸೆಗೆ ಕಾರಣವಾಗಿದೆ.