ಗದಗ: ಭರ್ಜರಿ ಮೆಣಸಿನಕಾಯಿ ಬೆಳೆದು ಬಂಪರ್ ಬೆಲೆ ಪಡೆದ ರೈತ ದಂಪತಿಗೆ ಇಲ್ಲಿನ ಎಪಿಎಂಸಿ ವರ್ತಕರು ಹಾಗೂ ರೈತರು ಹೂವಿನ ಹಾರ ಹಾಕಿ ಅಭಿನಂದಿಸಿದ್ದಾರೆ. ಮೆಣಸಿನಕಾಯಿಯನ್ನು ಮಕ್ಕಳಂತೆ ಜೋಪಾನ ಮಾಡುವ ಮೂಲಕ ಬಂಗಾರಂತದ ಬೆಳೆ ಬೆಳೆದಿದ್ದಾರೆ ಎಂದು ಎಪಿಎಂಸಿ ಸಿಬ್ಬಂದಿ ಅವರ ಬಗ್ಗೆ ಈ ಪ್ರಶಂಸೆ ವ್ಯಕ್ತಪಡಿಸಿದರು.

ಕಳೆದ ತಿಂಗಳು ಇದೇ ಮಾರುಕಟ್ಟೆಯಲ್ಲಿ ಕೋಟಮಚಗಿ ಗ್ರಾಮದ ರೈತರೊಬ್ಬರು ಬೆಳೆದ ಮೆಣಸಿನಕಾಯಿಗೆ ಕ್ವಿಂಟಲ್ಗೆ 70,199 ರೂ. ಬೆಲೆ ಬಂದಿತ್ತು. ಆಗ ಎಪಿಎಂಸಿಯವರು ಇದೇ ದೊಡ್ಡ ಮೊತ್ತ ಎಂದಿದ್ದರು. ಈ ತಿಂಗಳು ಕ್ವಿಂಟಲ್ಗೆ ಬರೋಬ್ಬರಿ 72,999 ರೂ. ದರವಿದೆ. ಕೊಪ್ಪಳ ಜಿಲ್ಲೆಯ ಯರೇಹಂಚಿನಾಳ ಗ್ರಾಮದ ಸಾವಿತ್ರಿ ಹಾಗೂ ಉಮೇಶ ರೆಡ್ಡಿ ಎಂಬ ರೈತ ದಂಪತಿ ಆ ದಾಖಲೆಯನ್ನು ಮುರಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಖಲೆಯ ಬೆಲೆ: ಹಿಂದಿನ ದಾಖಲೆಯನ್ನು ಉಡೀಸ್ ಮಾಡಿ, ದಾಖಲೆ ಬೆಲೆಗೆ ಮೆಣಸಿನಕಾಯಿ ಮಾರಾಟವಾಗಿದ್ದರಿಂದ ಈ ರೈತ ದಂಪತಿಯನ್ನು ಅಶೋಕ ಟ್ರೇಡರ್ಸ್ ಮಳಿಗೆಯಲ್ಲಿ ಗದಗ ಎಪಿಎಂಸಿ ವರ್ತಕರು ಹಾಗೂ ರೈತರು ಹೂವಿನ ಮಾಲೆ ಹಾಕಿ ಇತ್ತೀಚೆಗೆ ಅಭಿನಂದಿಸಿದ್ದಾರೆ. ಈ ಮೂಲಕ ಸಂಕ್ರಾಂತಿ ಸುಗ್ಗಿ ಹಬ್ಬದ ಹೊಸ್ತಿಲಲ್ಲಿ ಈ ದಂಪತಿ ಬೆಳೆದ ಕೆಂಪು ಸುಂದರಿಗೆ ಸಂಕ್ರಾಂತಿ ಬಂಪರ್ ಗಿಫ್ಟ್ ಸಿಕ್ಕಂತಾಗಿದೆ. ಕಷ್ಟಪಟ್ಟು ಬೆಳೆದ ಮೆಣಸಿನಕಾಯಿಗೆ ಬಂಗಾರದ ಬೆಲೆ ಮೀರಿಸುವ ಬೆಲೆ ಸಿಕ್ಕಿದೆ. ಕ್ವಿಂಟಲ್ ಕೆಂಪು ಮೆಣಸಿನಕಾಯಿಗೆ ಬರೋಬ್ಬರಿ 72,999 ಸಾವಿರ ದರ ಲಭಿಸಿದೆ. ನಮ್ಮ ಕಷ್ಟಕ್ಕೆ ಪ್ರತಿಫಲ ಸಿಕ್ಕಿದೆ ಎಂದು ರೈತ ದಂಪತಿ ಸಂತಸ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಅಂಗ ವೈಫಲ್ಯವಿದ್ದರೂ ಕೃಷಿಯಲ್ಲಿ ನಿಪುಣ: ಕಲಬುರಗಿ ವಿಶೇಷಚೇತನನ ಯಶೋಗಾಥೆ
ಸಂಬಳ ಸಾಲದೆ ಶಿಕ್ಷಕ ವೃತ್ತಿಗೆ ಗುಡ್ ಬೈ: ಯರೇಹಂಚಿನಾಳ ಗ್ರಾಮದ ರೈತ ಮಹಿಳೆ ಸಾವಿತ್ರಿ ದೈಹಿಕ ಶಿಕ್ಷಕಿಯಾಗಿದ್ದು, ಸದ್ಯ ವೃತ್ತಿಗೆ ಗುಡ್ ಬೈ ಹೇಳಿದ್ದಾರೆ. ಇನ್ನು ಪತಿ ಉಮೇಶ ನಾಗರೆಡ್ಡಿ ಬಿಎ, ಟಿಸಿಹೆಚ್ ಪದವೀಧರಾಗಿದ್ದಾರೆ. ಇವರೂ ಸಹ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಸದ್ಯ ಆ ವೃತ್ತಿಯಿಂದ ದೂರ ಸರಿದು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಅತಿಯಾದ ಮಳೆಯಿಂದ ಈ ಬಾರಿ ಕೆಂಪು ಮೆಣಸಿನಕಾಯಿ ಇಳುವರಿಯಲ್ಲಿ ಭಾರಿ ಕುಸಿತವಾಗಿದೆ. ಅಂತಹದ್ದರಲ್ಲಿ ಈ ರೈತ ದಂಪತಿ ಬಂಗಾರದ ಬೆಳೆ ಬೆಳೆದಿದ್ದನ್ನು ಕಂಡು ಅಲ್ಲಿದ್ದವರು ಅಚ್ಚರಿಯ ಜೊತೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಾಲ್ಕು ಲಕ್ಷ ಬಂಡವಾಳ, 25 ಲಕ್ಷ ಲಾಭ.. ಡ್ರ್ಯಾಗನ್ ಫ್ರೂಟ್ ಬೆಳೆದು ಯಶಸ್ವಿಯಾದ ದಾವಣಗೆರೆ ರೈತ
ಸಾವಯವ ಗೊಬ್ಬರ ಬಳಕೆ: 'ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿದ್ದೆವು. ಕಡಿಮೆ ಸಂಬಳ ಬರುತ್ತಿದ್ದರಿಂದ ಸಂಸಾರ ದೂಡುವುದು ಕಷ್ಟವಾಯಿತು. ಹಾಗಾಗಿ ಆ ವೃತ್ತಿಗೆ ಗುಡ್ ಬೈ ಹೇಳಿ ಕೃಷಿಯಲ್ಲಿ ತೊಡಗಿಕೊಂಡೆವು. ಈಗ ಕಷ್ಟಪಟ್ಟು ಬೆಳೆದ ಮೆಣಸಿನಕಾಯಿಗೆ ಬಂಗಾರದ ಬೆಲೆ ಬಂದಿದೆ. ಮೆಣಸಿನಕಾಯಿ ಬೆಳೆಯು ನಮ್ಮ ಕೈ ಹಿಡಿದಿದೆ. ಬಿಟ್ಟೂ ಬಿಡದೆ ಸುರಿದ ಮಳೆಯಿಂದ ನಮಗೆ ಆತಂಕ ಎದುರಾಗಿತ್ತು. ಆದರೆ, ನಮ್ಮ ಕಷ್ಟ ನಮ್ಮನ್ನು ಕೈ ಹಿಡಿದಿದೆ. ಸಾವಯವ ಗೊಬ್ಬರವನ್ನೇ ಹೆಚ್ಚಾಗಿ ಬಳಕೆ ಮಾಡಿದ್ದೆವು. ಈ ದರ ಬರಲಿದೆ ಅಂತ ನಾವು ಅಂದುಕೊಂಡಿರಲಿಲ್ಲ. ಉತ್ತಮ ಮೆಣಸಿನಕಾಯಿ ಬೆಳೆದಿದ್ದೇವೆ' ಅಂತಾರೆ ರೈತರಾದ ಉಮೇಶ ನಾಗರೆಡ್ಡಿ ಹಾಗೂ ಸಾವಿತ್ರಿ ದಂಪತಿ.
ಇದನ್ನೂ ಓದಿ: ಗಿರ್ ತಳಿಯ ಹಸು ಸಾಕಿ ಯಶಸ್ವಿಯಾದ ದಾವಣಗೆರೆ ರೈತ.. ತಿಂಗಳಿಗೆ ಲಕ್ಷಕ್ಕೂ ಅಧಿಕ ಸಂಪಾದನೆ