ಗದಗ : ಗಣೇಶ ಹಬ್ಬ ಅಂದ್ರೆ ಸಡಗರ ಸಂಭ್ರಮ ಇದ್ದೇ ಇರುತ್ತೆ. ನಗರದಲ್ಲಿ ಹಬ್ಬಕ್ಕೆ ಮುಂಚಿನ ದಿನವೇ ಖರೀದಿ ಭರಾಟೆ ಬಲು ಜೋರಾಗಿದೆ. ಮಾರ್ಕೆಟ್ನತ್ತ ಬರುತ್ತಿರೋ ಜನ ತಮಗೆ ಇಷ್ಟವಾದ ಮೂರ್ತಿಗಳನ್ನ ಬುಕ್ ಮಾಡಿದ್ದಾರೆ. ಪರಿಸರ ಸ್ನೇಹಿ ಗಣಪತಿಗಳನ್ನೇ ಪ್ರತಿಷ್ಠಾಪಿಸಿ ಪೂಜಿಸಬೇಕು ಅನ್ನೋ ನಿಟ್ಟಿನಲ್ಲಿ ಗದಗ ಜಿಲ್ಲೆ ತಯಾರಕರು ಒಂದೇ ಸೂರಿನಡಿ ಗಣೇಶ ಮೂರ್ತಿಗಳ ಮಾರಾಟ ಮಾಡೋದಕ್ಕೆ ಮುಂದಾಗಿದ್ದು, ಪರಿಸರ ಸ್ನೇಹಿ ಗಣಪಗಳ ಮಾರಾಟವೂ ಭರ್ಜರಿಯಾಗಿ ನಡೀತಿದೆ.
ಗದಗ ನಗರದ ಎಪಿಎಂಸಿ ಆವರಣದಲ್ಲಿ ಇರುವ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಗಣೇಶ ಮೂರ್ತಿ ಮಾರಾಟ ಭರ್ಜರಿಯಾಗಿದೆ. ಗದಗ ಬೆಟಗೇರಿ ಸೇರಿದಂತೆ ಸುತ್ತಲ ಜಿಲ್ಲೆಯ ಕಲಾವಿದರು ತಾವು ತಯಾರಿಸಿದ ಮೂರ್ತಿಗಳನ್ನ ಇಲ್ಲಿ ತಂದು ಮಾರಾಟ ಮಾಡೋದಕ್ಕೆ ಮುಂದಾಗಿದ್ದಾರೆ. ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಓಪಿ) ಗಣೇಶ ಮೂರ್ತಿಗಳ ತಯಾರಕರ ಹಾಗೂ ಮಾರಾಟದ ವಿರುದ್ಧ ಹೋರಾಟ ಮಾಡಿದ್ದ ಗದಗ ಮೂರ್ತಿ ತಯಾರಕರ ಸಂಘ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಕರಿಗೆ ಉತ್ತೇಜನ ನೀಡುತ್ತಾ ಬಂದಿದೆ.
ಒಂದೇ ಸೂರಿನಡಿ ಮಣ್ಣಿನ ಮೂರ್ತಿ ಮಾರಾಟಕ್ಕೆ ಅವಕಾಶ ಮಾಡಿದ್ದು, ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಮಾಡಿದೆ. ಸುಮಾರು ಒಂಭತ್ತು ವರ್ಷದಿಂದಲೂ ಒಂದೇ ಸೂರಿನಡಿ ಗಣೇಶ ಮೂರ್ತಿಗಳ ಮಾರಾಟ ಮಾಡಲಾಗುತ್ತಿದ್ದು, ಮೂರ್ತಿ ತಯಾರಕರು, ಮೂರ್ತಿಕೊಳ್ಳುವ ಇಬ್ಬರಿಗೂ ಅನುಕೂಲವಾಗುವಂತೆ ಮಾಡಿದೆ.
ಗದಗ ಬೆಟಗೇರಿ ಸೇರಿದಂತೆ ಧಾರವಾಡ, ಲಕ್ಷ್ಮೇಶ್ವರ, ಹಾವೇರಿಯಿಂದ ಕಲಾವಿದರು ಆಗಮಿಸಿ ಇಲ್ಲಿ ಮೂರ್ತಿ ಮಾರಾಟ ಮಾಡ್ತಿದ್ದಾರೆ. 10 ಇಂಚು ಎತ್ತರದಿಂದ ನಾಲ್ಕು ಅಡಿ ಎತ್ತರದವರೆಗಿನ ಮೂರ್ತಿಗಳು ಇಲ್ಲಿ ಲಭ್ಯ ಇವೆ. 200 ರೂಪಾಯಿಯಿಂದ 13 ಸಾವಿರ ರೂಪಾಯಿವರೆಗೂ ಮೂರ್ತಿಗಳಿಗೆ ದರ ನಿಗದಿ ಮಾಡಲಾಗಿದೆ. ದಗ್ಡುಶೇಟ್, ಲಾಲ್ ಬಾಗ್ ರಾಜಾ ಗಣಪತಿ, ಬಾಲ ಗಣೇಶ, ಸಿದ್ದಿವಿನಾಯಕ, ಪದ್ಮಾಸನ, ಸಿಂಹಾಸನಾರೂಢ ಸೇರಿದಂತೆ ವಿವಿಧ ಬಗೆ, ವಿನ್ಯಾಸದ ಗಣಪತಿಗಳನ್ನ ಮಾರಾಟಕ್ಕೆ ಇಡಲಾಗಿದೆ.
ಇದನ್ನೂ ಓದಿ: ಅದ್ಧೂರಿ ಗಣೇಶ ಉತ್ಸವಕ್ಕೆ ಸಿದ್ಧತೆ ಜೋರು.. ಈ ಸಲ ಕಾಂತಾರ ಗಣೇಶನಿಗೆ ಭಾರಿ ಡಿಮ್ಯಾಂಡ್..