ಗದಗ: ಪತಿ ಹೃದಯಾಘಾತದಿಂದ ಸಾವನಪ್ಪಿದ ಸುದ್ದಿ ಕೇಳಿ ಪತ್ನಿ ಸಹ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಬ್ಯಾಲವಾಡಗಿ ಗ್ರಾಮದಲ್ಲಿ ನಡೆದಿದೆ.
ಈರಪ್ಪ ಹಟ್ಟಿ (50) ಹಾಗೂ ಆತನ ಪತ್ನಿ ರೇಣವ್ವ ಹಟ್ಟಿ ( 38) ದಂಪತಿ ಸಾವಿನಲ್ಲೂ ಒಂದಗಿದ್ದಾರೆ. ಸುಖ ಸಂಸಾರ ನಡೆಸಿ ಮಕ್ಕಳು, ಮೊಮ್ಮಕ್ಕಳೊಂದಿಗಿದ್ದ ದಂಪತಿ ಜೀವನದಲ್ಲಿ ವಿಧಿ ಕ್ರೂರ ಆಟವಾಡಿದೆ. ಈರಪ್ಪ ಇದಕ್ಕಿದ್ದಂತೆ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟರು. ಸ್ಥಳೀಯರು ಜಮೀನಿಗೆ ತೆರಳಿದ್ದ ರೇಣವ್ವಗೆ ಗಂಡ ಮೃತಪಟ್ಟ ವಿಷಯವನ್ನು ತಿಳಿಸಿ ಮನೆಗೆ ಕರೆ ತಂದಿದ್ದಾರೆ.
ಈ ವೇಳೆ ಗಂಡನನ್ನು ನೆನೆದು ರೇಣವ್ವ ಕಣ್ಣೀರು ಹಾಕಿ ಮೂರ್ಚೆ ಹೋಗಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ದಂಪತಿ ಮೃತಪಟ್ಟಿದ್ದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸಾವಿನಲ್ಲು ಒಂದಾದ ಆದರ್ಶ ದಂಪತಿ ಶವಗಳು ಕಂಡು ಸ್ಥಳೀಯರು ಕಂಬನಿ ಮಿಡಿದರು.