ಗದಗ: ಹವಾಮಾನ ವೈಪರೀತ್ಯದ ಪರಿಣಾಮ, ಜಿಲ್ಲೆಯಲ್ಲಿ ರೈತರ ಬದುಕು ಮೂರಾಬಟ್ಟೆಯಾಗಿದೆ. ಅತಿವೃಷ್ಠಿಯಿಂದಾಗಿ ಒಂದೆಡೆ ಭೂಮಿಯಲ್ಲಿನ ಬೆಳೆ ಹಾಳಾದರೆ, ಮತ್ತೊಂದೆಡೆ ಮಳೆಯಿಂದ ಕಣಜ(ಹಗೆವು)ದಲ್ಲಿ ಸಂಗ್ರಹಿಸಿಟ್ಟ ಧಾನ್ಯಗಳು ಕೊಳೆತು ನಾರುತ್ತಿವೆ. ಹಿಂಗಾರು ಬಿತ್ತನೆ ಹಾಗು ಮನೆಯಲ್ಲಿ ತಿನ್ನಲು ಧಾನ್ಯಗಳಿಲ್ಲದೆ ರೈತರು ಕಂಗಾಲಾಗಿದ್ದಾರೆ. ಸದ್ಯ ಗದಗ ತಾಲೂಕಿನ ತಿಮ್ಮಾಪುರ ಗ್ರಾಮದ ರೈತರು ಸಂಕಷ್ಟದಲ್ಲಿದ್ದಾರೆ.
ಕಳೆದ ವರ್ಷ ಕಷ್ಟಪಟ್ಟು ಬೆಳೆದಿದ್ದ ಜೋಳ, ಕಡಲೆ, ಗೋಧಿ ಹಾಗು ಕುಸುಬೆ ಹೀಗೆ ಅನೇಕ ಧಾನ್ಯಗಳನ್ನು ಈ ಹಗೆವಿನಲ್ಲಿ ರೈತರು ಕೂಡಿಟ್ಟಿದ್ದರು. ಸದ್ಯ ಮಳೆ ಪ್ರಮಾಣ ಕಡಿಮೆಯಾಗಿದ್ದು, ಹಿಂಗಾರು ಬಿತ್ತನೆ ಮಾಡಬೇಕೆಂದು ಕಣಜ ತೆರೆದು ನೋಡಿದರೆ ನೀರೋ ನೀರು. ಸುಮಾರು 500ಕ್ಕೂ ಹೆಚ್ಚು ಹಗೆವುಗಳ ಪೈಕಿ 100ಕ್ಕೂ ಹೆಚ್ಚು ಹಗೆವಿನಲ್ಲಿದ್ದ ಧಾನ್ಯಗಳು ಹಾಳಾಗಿವೆ.
ತಿಮ್ಮಾಪುರ ಗ್ರಾಮದಲ್ಲಿ ಅನಾದಿ ಕಾಲದಿಂದಲೂ ನೂರಾರು ಕಣಜಗಳಲ್ಲಿ ಧಾನ್ಯಗಳನ್ನು ಸಂಗ್ರಹಿಸಿಡಲಾಗುತ್ತಿದೆ. ಧಾನ್ಯಗಳನ್ನು ಮನೆಯಲ್ಲಿಟ್ಟರೆ ಕ್ರಿಮಿಕೀಟಗಳು ನಾಶ ಮಾಡುತ್ತವೆ ಎಂಬ ಉದ್ದೇಶದಿಂದ ಈ ಕಣಜಗಳಲ್ಲಿ ಸಂಗ್ರಹಿಸಿಡುತ್ತಾರೆ. ಇವುಗಳನ್ನು ತಮಗೆ ಬೇಕಾದ ವೇಳೆ ತೆಗೆದುಕೊಳ್ಳುವ ವಾಡಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಾಗಾಗಿ ಒಬ್ಬೊಬ್ಬ ರೈತರು ಹತ್ತಾರು ಕ್ವಿಂಟಲ್‌ನಿಂದ ಹಿಡಿದು ನೂರಾರು ಕ್ವಿಂಟಲ್ವರೆಗೆ ಇದರಲ್ಲಿ ಸಂಗ್ರಹಿಸಿಟ್ಟಿರುತ್ತಾರೆ. ಒಂದು ವರ್ಷ ಬೆಳೆದ ಧಾನ್ಯಗಳನ್ನು ಸಂಗ್ರಹಿಸಿದರೆ ಸಾಕು ಮೂರು-ನಾಲ್ಕು ವರ್ಷ ಬರಗಾಲ, ಅತಿವೃಷ್ಠಿ, ಅನಾವೃಷ್ಟಿ ಸಂಭವಿಸಿದರೂ ಹೆದರಬೇಕಿಲ್ಲ. ಆದರೆ ಈ ವರ್ಷ ತೇವಾಂಶ ಹೆಚ್ಚಾಗಿ ಧಾನ್ಯಗಳಿಗೆ ಹಾನಿಯಾಗಿದೆ.
'ಈ ವರ್ಷ ತಿನ್ನಲು ಮನೆಯಲ್ಲಿ ಕಾಳುಗಳಿಲ್ಲ. ಹಿಂಗಾರು ಬಿತ್ತನೆ ಮಾಡಲು ಬಿತ್ತನೆ ಬೀಜಗಳೂ ಇಲ್ಲ. ನಮ್ಮ ಬದುಕು ಬೀದಿಗೆ ಬಂದಿದೆ. ಸರ್ಕಾರ ಇದನ್ನು ಪರಿಗಣಿಸಿ ನೊಂದ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ, ಗೊಬ್ಬರ ನೀಡಬೇಕು' ಅಂತಿದ್ದಾರೆ ಅನ್ನದಾತರು.