ಗದಗ: ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದ ಜೋಡಿ ವಿಚ್ಛೇದನ ನೀಡುವ ಮಟ್ಟಿಗೆ ತಲುಪಿದ್ದರು. ಆದರೆ ಇದೀಗ ಲೋಕ್ ಅದಾಲತ್ ಅನ್ನುವ ಮಾಯಾ ದಂಡ ಅವರನ್ನು ಮತ್ತೆ ಒಂದಾಗಿಸಿದೆ. ನೊಂದ ಮನಗಳು ಈಗ ಒಟ್ಟಾಗಿ ಹೊಸ ಕನಸು ಕಾಣುವಂತಾಗಿದೆ.
ಶನಿವಾರ ನಗರದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಐದು ಜೋಡಿಗಳ ವ್ಯಾಜ್ಯ ಸೇರಿದಂತೆ ಬರೋಬ್ಬರಿ 4000 ಕೇಸ್ಗಳನ್ನ ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಲಾಗಿದೆ. ಇಲ್ಲಿ ಐದು ಜೋಡಿಗಳು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ದೂರವಾಗಿದ್ದರು. ಅವರೆಲ್ಲರಿಗೂ ಕೌನ್ಸಿಲಿಂಗ್ ಮಾಡುವ ಮೂಲಕ ಮತ್ತೊಮ್ಮೆ ಒಟ್ಟಾಗಿ ಜೀವನ ನಡೆಸಲು ಅವಕಾಶ ಮಾಡಿಕೊಡಲಾಗಿದೆ. ಜಿಲ್ಲಾ ನ್ಯಾಯಾಧೀಶೆ ಮಹಾಲಕ್ಷ್ಮೀ ಅವರು ಕೆಲ ಜೋಡಿಗಳಿಗೆ ಬುದ್ಧಿಮಾತು ಹೇಳಿ ಜೊತೆಯಾಗಿ ಬಾಳುವಂತೆ ಸಲಹೆ ನೀಡಿದ್ದಾರೆ.
ಅಪ್ಪ- ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ, ದಂಪತಿ ಗಲಾಟೆಯಿಂದ ತಂದೆ ಅಥವಾ ತಾಯಿಯ ಪ್ರೀತಿ ಕಳೆದುಕೊಂಡಿದ್ದ ಮಕ್ಕಳಿಗೆ ಇದೀಗ ಹೊಸ ಹುಮ್ಮಸ್ಸು ದೊರೆತಿದೆ. ಆ ಮಕ್ಕಳು ಅಪ್ಪ- ಅಮ್ಮ ಮತ್ತೆ ಒಂದಾದರು ಎಂಬ ಖುಷಿಯಲ್ಲಿ ತೇಲಾಡುತ್ತಿದ್ದಾರೆ.
ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಐದು ಜೋಡಿಗಳ ಮನವೊಲಿಸಿ ಮತ್ತೆ ಒಟ್ಟಿಗೆ ಜೀವನ ಮಾಡುವಂತೆ ಮಾಡಲಾಗಿದೆ. ಡಿವೋರ್ಸ್ ಮಾಡುವುದರಿಂದ ಆಗುವ ಸಾಧಕ ಬಾಧಕವನ್ನು ಈ ಜೋಡಿಗಳಿಗೆ ತಿಳಿಸಿ ಒಂದಾಗುವಂತೆ ಮಾಡಲಾಗಿದೆ. ಜಿಲ್ಲಾ ನ್ಯಾಯಾಲಯದಲ್ಲಿ ಈ ಜೋಡಿಗಳು ಮತ್ತೆ ಒಂದಾಗುತ್ತಿರುವ ಕ್ಷಣವನ್ನ ಹಬ್ಬದಂತೆ ಆಚರಿಸಲಾಗಿದೆ. ಪರಸ್ಪರ ಹಾರ ಬದಲಾಯಿಸಿದ ದಂಪತಿಗಳು ಸಿಹಿ ನೀಡಿ, ನಡೆದ ಕಹಿ ಘಟನೆಯನ್ನು ಮರೆತು ಸಾಗಿದ್ದಾರೆ.